ಮಡಿಕೇರಿ ಡಿ.18 : ವಿಶ್ವ ರಾಷ್ಟ್ರ ಸಂಸ್ಥೆಯ ಜಾಗತಿಕ ಅಲ್ಪಸಂಖ್ಯಾತ ಜನಾಂಗಗಳ ಹಕ್ಕುಗಳ ದಿನದ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ 14ನೇ ವರ್ಷದ “ಗನ್ ಕಾರ್ನಿವಲ್ ತೋಕ್ ನಮ್ಮೆ” ನಾಪೋಕ್ಲು ಕೊಳಕೇರಿಯ ನೂರಂಬದ ನಾಡ್ ನಲ್ಲಿ ಸಂಭ್ರಮದಿಂದ ನಡೆಯಿತು.
ಕೊಳಕೇರಿಯ ನೂರಂಬದ ನಾಡ್ ನಲ್ಲಿರುವ ರಮ್ಮಿ ನಾಣಯ್ಯ ಹಾಗೂ ರೀನಾ ನಾಣಯ್ಯ ಅವರ ಕಾವೇರಿ ಎಸ್ಟೇಟ್ ನ ಕಾವೇರಿ ನದಿ ದಂಡೆಯಲ್ಲಿ ನಡೆದ ನಮ್ಮೆಯಲ್ಲಿ ಕೋವಿಗಳನ್ನು ಸಾಂಪ್ರದಾಯಿಕ ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ರಾಜ್ಯಸಭಾ ಮಾಜಿ ಸದಸ್ಯ, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಹಾಗೂ ವಿರೋಧ ಪಕ್ಷದ ಮಾಜಿ ನಾಯಕ ಬಿ.ಕೆ.ಹರಿಪ್ರಸಾದ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು “ತೋಕ್ ನಮ್ಮೆ” ಗೆ ಸಾಕ್ಷಿಯಾದರು.
ನಮ್ಮೆಯ ನೇತೃತ್ವ ವಹಿಸಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಜನಪದೀಯ ಹಬ್ಬವಾಗಿ ತೋಕ್ ನಮ್ಮೆಯನ್ನು ಅತಿ ಉತ್ಸಾಹದಿಂದ ಸಾರ್ವತ್ರಿಕವಾಗಿ ಆಚರಿಸುವ ಮೂಲಕ ಕೋವಿ ಹೊಂದುವ ಕೊಡವರ ಹಕ್ಕನ್ನು ಪ್ರತಿಪಾದಿಸಲಾಗುತ್ತಿದೆ ಎಂದರು.
ಗನ್ ಕೊಡವ ಜನಾಂಗದ ಧಾರ್ಮಿಕ-ಜನಾಂಗೀಯ ಸಂಸ್ಕಾರವಾಗಿದೆ, ಗತಕಾಲದ ಶ್ರೀಮಂತ ಭಂಡಾರವಾಗಿದೆ. ಇದೇ ಕಾರಣಕ್ಕೆ ಪ್ರಸ್ತುತದಲ್ಲಿ ಮತ್ತು ಭವಿಷ್ಯದಲ್ಲಿಯೂ ಈ ನಮ್ಮ ಹಕ್ಕು ಮುಂದುವರಿಯುತ್ತದೆ. ಕೊಡವರು ಶಸ್ತ್ರಾಸ್ತ್ರ/ಬಂದೂಕನ್ನು ಹೊಂದಲು ವಿನಾಯಿತಿ ನೀಡಲಾಗಿದೆ. ಭಾರತವು ಸ್ವಾತಂತ್ರ್ಯ ಪಡೆದ ನಂತರ, ಭಾರತೀಯ ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್ 3 ಮತ್ತು 4 ರಡಿಯಲ್ಲಿ ಗನ್ ವಿನಾಯಿತಿ ಹಕ್ಕು ಅಸ್ತಿತ್ವದಲ್ಲಿದೆ. ನಮ್ಮ ಹಕ್ಕಿನ ಕುರಿತು ಇಡೀ ವಿಶ್ವಕ್ಕೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ “ತೋಕ್ ನಮ್ಮೆ”ಯಂತಹ ಕಾರ್ಯಕ್ರಮಗಳ ಮೂಲಕ ಕೋವಿಗಳನ್ನು ಪ್ರದರ್ಶಿಸಿ ಹಕ್ಕನ್ನು ಶಾಶ್ವತಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
1956 ರಲ್ಲಿ ಕೂರ್ಗ್ ಪ್ರದೇಶವನ್ನು ಪುನರ್ ಸಂಘಟನೆಯ ಕಾಯಿದೆಯಡಿ ವಿಲೀನಗೊಳಿಸಿದ ನಂತರ ಆಡಳಿತ ವರ್ಗವು ನಮ್ಮ ಧಾರ್ಮಿಕ ಸಂಸ್ಕಾರದ ಗನ್ ಹಕ್ಕುಗಳನ್ನು ವಿವಿಧ ರೀತಿಯಲ್ಲಿ ಬಳಸಿಕೊಂಡು ಅಪಾಯಕ್ಕೆ ತಳ್ಳಲು ಪ್ರಾರಂಭಿಸಿತು. ರಾಜ್ಯದ ಪ್ರಬಲ ಸಮುದಾಯಗಳ ಮೂಲಕ ಆಡಳಿತ ನಡೆಸುತ್ತಿರುವವರು, ಹಳೇ ಮೈಸೂರಿನ ಪ್ರಮುಖ ಸಮುದಾಯಗಳ ಆಜ್ಞೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಸಂಸ್ಥೆಗಳು ಕೊಡವರನ್ನು ದೇವಟ್‍ಪರಂಬ ಕೊಡವ ನರಮೇಧದ ಫಲಾನುಭವಿಗಳೆಂದು ಕರೆಯುವ ಕೂಟವನ್ನು ಗುರಾಣಿಯಾಗಿ ಬಳಸಿಕೊಂಡು ಕೊಡವ ಮಣ್ಣಿನಿಂದ ನಮ್ಮನ್ನು ಬೇರ್ಪಡಿಸಲು ಮತ್ತು ನಮ್ಮ ಪಾರಂಪರಿಕ ಭೂಮಿ, ಸಂಸ್ಕಾರದ ಬಂದೂಕು ಹಕ್ಕುಗಳೊಂದಿಗೆ ಮಧ್ಯಪ್ರವೇಶಿಸಲು ಪ್ರಯತ್ನಿಸುತ್ತಿವೆ. ಕೊಡವರ ಪವಿತ್ರ ಯಾತ್ರಾಸ್ಥಳ ತಲಕಾವೇರಿಗೆ ಪ್ರವೇಶಿಸಲು ತಡೆಯೊಡ್ಡಲಾಗುತ್ತಿದೆ. ಪವಿತ್ರವಾದ ದೇವಟ್ ಪರಂಬು ನರಮೇಧದ ಸ್ಮಾರಕವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಕೊಡವರಿಗೆ ಎಸ್‍ಟಿ ಟ್ಯಾಗ್ ಸಿಗುವುದನ್ನೂ ತಡೆಯಲಾಗುತ್ತಿದೆ. ಈ ಹೇಯ ಕೆಲಸಕ್ಕಾಗಿ ಪ್ರಾಚೀನ ದಾಖಲೆಗಳನ್ನು ನಾಶಮಾಡಲು ತಮ್ಮದೇ ಆದ ಅಧಿಕಾರವನ್ನು ಬಳಸಿಕೊಳ್ಳಲಾಗುತ್ತಿದೆ. ಆದಿಮಸಂಜಾತ ಬುಡಕಟ್ಟು ಕೊಡವರ ಇತಿಹಾಸವನ್ನು ಕೆಡಿಸಲು ಇತಿಹಾಸಕಾರರನ್ನು ನೇಮಿಸಿಕೊಳ್ಳಲಾಗಿದೆ. ಅನ್ಯದ್ವೇಷವನ್ನು ಸೃಷ್ಟಿಸುವ ಪ್ರಯತ್ನ ಮಾಡಲಾಗಿದೆ.
ನಾವು ಸಂವಿಧಾನದ ಅಡಿಯಲ್ಲಿ ಯಾವುದೇ ಹಕ್ಕುಗಳನ್ನು ಹೊಂದಿದ್ದರೂ ಅದನ್ನು ಅವರು ವಿರೋಧಿಸುತ್ತಾರೆ. ವ್ಯವಸ್ಥಿತವಾಗಿ ಸರ್ಕಾರವು ನಮ್ಮ ಎಲ್ಲಾ ಹಕ್ಕುಗಳು ಮತ್ತು ಸ್ವಯಂ ನಿರ್ಣಯದ ಹಕ್ಕುಗಳನ್ನು ಕಸಿದುಕೊಂಡಿದೆ. ಇದು ಗಂಭೀರವಾದ ಸಾಂವಿಧಾನಿಕ ಉಲ್ಲಂಘನೆಯಾಗಿದೆ. ಅಪರೂಪದ ಅತ್ಯಂತ ಸೂಕ್ಷ್ಮ ಪುರಾತನ ಕೊಡವ ಜನಾಂಗವನ್ನು ರಕ್ಷಿಸುವ ಬದಲು, ಅವರು ತಮ್ಮ ರಾಜಕೀಯ ಪ್ರಭಾವ ಮತ್ತು ಜನಸಂಖ್ಯಾ ಬಲದಿಂದ ನಮ್ಮನ್ನು ಬೆದರಿಸುತ್ತಿದ್ದಾರೆ ಎಂದು ನಾಚಪ್ಪ ಆರೋಪಿಸಿದರು.
ಗನ್ ಒಂದು ಧಾರ್ಮಿಕ ಮತ್ತು ಸಾಂಸ್ಕೃತಿಕ ಲಾಂಛನ, ಮಾತ್ರವಲ್ಲ ಕೊಡವ ಜನಾಂಗದ ಜಾನಪದ ಸಂಕೇತವಾಗಿದೆ. ಈ ಪ್ರಾಚೀನ ಹೆಮ್ಮೆಯನ್ನು ರಕ್ಷಿಸಬೇಕು ಮತ್ತು ಭವಿಷ್ಯದ ಪೀಳಿಗೆಗೆ ವರ್ಗಾಯಿಸಬೇಕು. ಆದ್ದರಿಂದ ನಮ್ಮ ಬೇಡಿಕೆಗಳನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕೆಂದು ಅವರು ಒತ್ತಾಯಿಸಿದರು.
ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕು. ಕೊಡವ ಜನಾಂಗೀಯ ಸಂಸ್ಕಾರದ ಗನ್ ಅನ್ನು ನಮ್ಮ ಸಂವಿಧಾನದ 25 ಮತ್ತು 26 ನೇ ವಿಧಿಯ ಅಡಿಯಲ್ಲಿ ಸಿಖ್ಖರ ಕಿರ್ಪಾನ್‍ಗೆ ಸಮಾನವಾಗಿ ರಕ್ಷಿಸಬೇಕು. 3. ಕೊಡವ ಜನಾಂಗೀಯ ಬುಡಕಟ್ಟು ಜನಾಂಗದವರು ಹೆಚ್ಚು ಜನನಿಬಿಡದ ಆಯಕಟ್ಟಿನ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿರುವುದರಿಂದ, ಕೊಡವ ಮಹಿಳೆಯರಿಗೆ ಸುರಕ್ಷತೆ ಮತ್ತು ಭದ್ರತೆಯು ಅತಿಮುಖ್ಯವಾಗಿದೆ. ಅಲ್ಲದೆ ಪ್ರಸ್ತುತ ಕೊಡವ ಭೂಮಿಯ ಗ್ರಾಮ ಮತ್ತು ಕುಗ್ರಾಮಗಳಲ್ಲಿ ದೇಶದ್ರೋಹಿಗಳ ನುಸುಳುವಿಕೆಯ ಆತಂಕವಿದೆ. ಆದ್ದರಿಂದ ಸ್ವಯಂ ರಕ್ಷಣೆಗಾಗಿ ಕೊಡವ ಮಹಿಳೆಯರಿಗೆ ಗನ್ ಶೂಟಿಂಗ್ ವಿಶೇಷ ತರಬೇತಿಯನ್ನು ಸರ್ಕಾರ ಪ್ರಾರಂಭಿಸಬೇಕು.
ಕೊಡವರ ವಿನಾಯಿತಿ ಪ್ರಮಾಣಪತ್ರಗಳ ವಿತರಣೆಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಆಡಳಿತಾತ್ಮಕ ಅಡಚಣೆಗಳನ್ನು ಸರ್ಕಾರ ತೆಗೆದು ಹಾಕಬೇಕು. ಸರ್ಕಾರ ಏಕಗವಾಕ್ಷಿ ಕಾರ್ಯಕ್ರಮದಡಿ ವಿತರಿಸಲು ಕ್ರಮ ಕೈಗೊಳ್ಳಬೇಕು.
ಕೊಡವ ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ವಿವಾಹ ಸಂದರ್ಭ ವಿನಾಯಿತಿ ಪ್ರಮಾಣಪತ್ರ ಮತ್ತು ಗನ್ ಕಡ್ಡಾಯವಾಗಿ ನೀಡಬೇಕು. ಪೊಟ್ಟಿ ದುಂಬಚಿಡುವ ಆಚರಣೆಯಲ್ಲಿ ಬಂದೂಕು ಮತ್ತು ಬಂದೂಕು ವಿನಾಯಿತಿ ಪ್ರಮಾಣಪತ್ರವನ್ನು ಸೇರಿಸಬೇಕು. ಎಲ್ಲಾ ಕೊಡವ ಆಚರಣೆಗಳಲ್ಲಿ, ಗುಂಡು ಹಾರಿಸುವ ಸಂಪ್ರದಾಯ ಮುಂದುವರಿಸಬೇಕು. ಜನನ, ಮರಣ, ಮದುವೆ ಮತ್ತು ತಲಕಾವೇರಿಯಲ್ಲಿ ತೀರ್ಥೋದ್ಭವದ ಸಂದರ್ಭದಲ್ಲಿಯೂ ಇದು ಆಚರಣೆಯಾಗಬೇಕು ಎಂದು ನಾಚಪ್ಪ ಒತ್ತಾಯಿಸಿದರು.
::: ಕೊಡವ ವಿಭೂಷಣ ಪ್ರಶಸ್ತಿ ಪ್ರದಾನ :::
ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ 9 ಸಾಧಕರಿಗೆ “ತೋಕ್ ನಮ್ಮೆ” ಪ್ರಯುಕ್ತ ಸಿಎನ್‍ಸಿ ಸಂಘಟನೆ ಕೊಡವ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿತು.
ಶಿಲ್ಪ ಕಲೆಯಲ್ಲಿ ಅಪ್ಪನೆರವಂಡ ಕಿರಣ್ ಸುಬ್ಬಯ್ಯ, ಶಿಕ್ಷಣ ಕ್ಷೇತ್ರದಲ್ಲಿ ಫೀ.ಮಾ.ಕಾರ್ಯಪ್ಪ ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ.ಚೌರಿರ ಜಗತ್ ತಿಮ್ಮಯ್ಯ, ಸಹಕಾರ ಕ್ಷೇತ್ರದಲ್ಲಿ ಮಾಚೆಟ್ಟಿರ ಚೋಟು ಕಾವೇರಪ್ಪ, ಸಾಂಸ್ಕೃತಿಕ ಕ ಕ್ಷೇತ್ರ ಆಕಾಶವಾಣಿಯ ನಿವೃತ್ತ ಉದ್ಘೋಷಕಿ ಕೂಪದಿರ ಶಾರದ ನಂಜಪ್ಪ, ಪ್ರಗತಿಪರ ಕೃಷಿ ಬಾಚರಣಿಯಂಡ ಹ್ಯಾರಿ ತಮ್ಮಯ್ಯ, ಪತ್ರಿಕಾರಂಗ ಶಕ್ತಿ ಪತ್ರಿಕೆಯ ಉಪಸಂಪಾದಕ ಕಾಯಪಂಡ ಶಶಿ ಸೋಮಯ್ಯ, ಕಲಾ ಕ್ಷೇತ್ರ ಐಮಂಡ ರೂಪೇಶ್ ನಾಣಯ್ಯ, ಸೇನಾ ಕ್ಷೇತ್ರ ನಿವೃತ್ತ ಯೋಧ ಬಚ್ಚಮಂಡ ಬೆಲ್ಲು ಪೂವಪ್ಪ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ನಂದಿನೆರವಂಡ ಟಿಪ್ಪು ಬಿದ್ದಪ್ಪ ಪ್ರಶಸ್ತಿ ಪಡೆದರು.
::: ಸ್ಪರ್ಧೆ :::
ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗಾಗಿ ಗುಂಡು ಹಾರಿಸುವ ಸ್ಪರ್ಧೆ ನಡೆಯಿತು. ನಮ್ಮೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಂದೂಕುಗಳನ್ನು ಪ್ರದರ್ಶಿಸಿದ ಕೊಡವ ಕೊಡವತಿಯರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ತಮ್ಮ ಕೋವಿ ಹೊಂದುವ ಹಕ್ಕನ್ನು ಪ್ರತಿಪಾದಿಸಿದರು, ಅಲ್ಲದೆ ಕೊಡವ ಲ್ಯಾಂಡ್ ಪರ ಘೋಷಣೆಗಳನ್ನು ಕೂಗಿದರು.
ಕಲಿಯಂಡ ಮೀನಾ ಪ್ರಕಾಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಬಾಚಮಂಡ ಕಸ್ತೂರಿ ಪೂವಪ್ಪ, ಪೆಮ್ಮುಡಿಯಂಡ ಇಂದಿರಾ ಅಪ್ಪಣ್ಣ, ಅಪ್ಪಚ್ಚಿರ ರೀನಾ ನಾಣಯ್ಯ, ಲೆಫ್ಟಿನೆಂಟ್ ಕರ್ನಲ್ ಪಾರ್ವತಿ, ನಂದಿನೆರವಂಡ ನಿಶಾ ಅಚ್ಚಯ್ಯ, ಮಂದಪಂಡ ರಚನಾ ಮನೋಜ್, ಪುಲ್ಲೇರ ಸ್ವಾತಿ ಕಾಳಪ್ಪ, ನಂದೇಟಿರ ಕವಿತಾ, ಮಂದಪಂಡ ರಮ್ಯ ಸೂರಜ್, ಅಜ್ಜಿನಿಕಂಡ ಪ್ರೇಮಾ, ಅಪ್ಪನೆರವಂಡ ಸ್ವಾತಿ ಕಿರಣ್, ಚೋಳಪಂಡ ಜ್ಯೋತಿ ನಾಣಯ್ಯ, ಕಲಿಯಂಡ ಪ್ರಕಾಶ್, ಬಾಚಮಂಡ ರಾಜ ಪೂವಣ್ಣ, ಅಪ್ಪಚ್ಚಿರ ರಮ್ಮಿ ನಾಣಯ್ಯ, ಜಮ್ಮಡ ಮೋಹನ್, ಬಾಚಿರಾಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟೀರ ಲೋಕೇಶ್, ಕಿರಿಯಮಾಡ ಶರಿನ್, ಚಂಬಂಡ ಜನತ್, ನಂದೇಟಿರ ರವಿ ಸುಬ್ಬಯ್ಯ, ಚೋಳಪಂಡ ನಾಣಯ್ಯ, ಅಪ್ಪೇಂಗಡ ಮಾಲೆ, ಪುಟ್ಟಿಚಂಡ ಡಾನ್ ದೇವಯ್ಯ, ಪಾರ್ವಂಗಡ ನವೀನ್, ಕಾಂಡೇರ ಸುರೇಶ, ನಂದಿನೆರವಂಡ ವಿಜು, ನಂದಿನೆರವಂಡ ಅಪ್ಪಯ್ಯ, ನಂದಿನೆರವಂಡ ಬಿದ್ದಪ್ಪ, ನಂದಿನೆರವಂಡ ದಿನೇಶ್, ನಂದಿನೆರವಂಡ ಮಧು, ಬೊಟ್ಟಂಗಡ ಗಿರೀಶ್, ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಅಪ್ಪುಮಣಿಯಂಡ ರಘು, ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಅಪ್ಪಾರಂಡ ವಿಜು, ಅಪ್ಪಾರಂಡ ಪ್ರಕಾಶ್, ಅಪ್ಪಾರಂಡ ಪ್ರಸಾದ್, ಪಾಲೆಕಂಡ ಪ್ರತಾಪ್, ಪಾಂಡಂಡ ನರೇಶ್, ನಂದಿನೆರವಂಡ ಬೋಪಣ್ಣ, ಅಪ್ಪುಮಣಿಯಂಡ ಬನ್ಸಿ, ಅಪ್ಪುಮಣಿಯಂಡ ಬಿನ್ನು, ಬೇಪಡಿಯಂಡ ಬಿದ್ದಪ್ಪ, ಚಿರಿಯಪಂಡ ಪ್ರಕಾಶ್, ಚಿರಿಯಪಂಡ ಶ್ಯಾಮ್, ಕೇಚಮಾಡ ಶರತ್, ಮಾಚಿಮಾಡ ಸುನಿಲ್, ಚೀಯಾಕಪೂವಂಡ ರಂಜು, ಮಂದಪಂಡ ಮನೋಜ್, ಮಂದಪಂಡ ಸೂರಜ್, ಪಟ್ಟೆಮಾಡ ಕುಶ, ಬೊಟ್ಟಂಗಡ ಗಿರೀಶ್, ಅಳ್ಮಂಡ ನೆಹರು, ಆಳ್ಮಂಡ ಜೈ, ಮೇದೂರ ಕಂಠಿ ನಾಣಿಯಪ್ಪ, ನಾಪಂಡ ಅರುಣ್, ಅಪ್ಪಚ್ಚಿರ ಸುಧಿ, ಅಪ್ಪಚ್ಚಿರ ಸುರೇಶ್, ಅಜ್ಜಿನಿಕಂಡ ಸನ್ನಿ ಮಾಚಯ್ಯ, ಚೀಯಕಪೂವಂಡ ಮುತ್ತಪ್ಪ, ಮಾಚೆಟ್ಟಿರ ಸಚಿನ್ ಮಂದಣ್ಣ, ಅಪ್ಪಚೆಟ್ಟೋಳಂಡ ರವಿ, ಬಾಚಮಂಡ ಲವ ಚಿಣ್ಣಪ್ಪ, ಪುಲ್ಲೇರ ಕಾಳಪ್ಪ, ಪೆÇರಕೊಂಡ ಬೋಪಣ್ಣ, ಪೊರಕೊಂಡ ಚೆಟ್ಟಿಚ, ಕೋಳೇರ ರನ್ನು, ಮೋರ್ಕಂಡ ಶರತ್ ಕುಶಾಲಪ್ಪ, ಮೋರ್ಕಂಡ ಬೋಪಣ್ಣ, ಚಿಯಕಪೂವಂಡ ಮುತ್ತಪ್ಪ, ಕಾಟುಮಣಿಯಂಡ ಉಮೇಶ್, ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕೊಡವ ಲ್ಯಾಂಡ್ ಪರ ಪ್ರತಿಜ್ಞಾವಿಧಿ ಸ್ವೀಕರಿಸಿದರು.