ಮಡಿಕೇರಿ ಡಿ.19 : ಬುಡಕಟ್ಟು ಜನರು ಈ ದೇಶದ ಮಾಲೀಕರು, ತಮ್ಮ ಸಂಸ್ಕೃತಿ ಮತ್ತು ಸಂಸ್ಕಾರದ ಉಳಿವಿಗಾಗಿ ಕೊಡವರು ಎಸ್‍ಟಿ ಟ್ಯಾಗ್ ಹೊಂದುವುದರಲ್ಲಿ ತಪ್ಪಿಲ್ಲ ಎಂದು ರಾಜ್ಯಸಭಾ ಮಾಜಿ ಸದಸ್ಯ, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಹಾಗೂ ವಿರೋಧ ಪಕ್ಷದ ಮಾಜಿ ನಾಯಕ ಬಿ.ಕೆ.ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ರಾಷ್ಟ್ರ ಸಂಸ್ಥೆಯ ಜಾಗತಿಕ ಅಲ್ಪಸಂಖ್ಯಾತ ಜನಾಂಗಗಳ ಹಕ್ಕುಗಳ ದಿನದ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ನಾಪೋಕ್ಲು ಕೊಳಕೇರಿಯ ನೂರಂಬದ ನಾಡ್ ನಲ್ಲಿ ನಡೆದ 14ನೇ ವರ್ಷದ “ಗನ್ ಕಾರ್ನಿವಲ್ ತೋಕ್ ನಮ್ಮೆ” ಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕೊಡವರು ತಮ್ಮತನವನ್ನು ತಾವು ಉಳಿಸಿಕೊಳ್ಳಲು ಎಸ್‍ಟಿ ಟ್ಯಾಗ್ ನ್ನು ಪಡೆಯಲೇಬೇಕು. ಬುಡಕಟ್ಟು ಜನರು ಈ ದೇಶದ ಮಾಲೀಕರಾಗಿದ್ದು, ಉತ್ತರ ಭಾರತ ಮತ್ತು ದಕ್ಷಿಣ ಭಾರತದಲ್ಲಿ ಪ್ರಬಲರಾಗಿದ್ದಾರೆ. ಮೇಘಾಲಯ, ಅರುಣಾಚಲ ಪ್ರದೇಶ, ನಾಗಲ್ಯಾಂಡ್ ನಲ್ಲಿ ರಾಜಕೀಯ ಮೀಸಲಾತಿಯ ಮೂಲಕ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿದ್ದಾರೆ. ಕೊಡವರು ಕೂಡ ತಮ್ಮ ಹಕ್ಕನ್ನು ತಾವು ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಕೊಡಗನ್ನು ಚಿಕ್ಕದೆಂದು ಹೇಳಿಕೊಳ್ಳಬೇಡಿ, ಪಾಂಡೀಚೇರಿಯಲ್ಲಿ ಕೇವಲ 2ಲಕ್ಷ ಜನಸಂಖ್ಯೆ ಇದ್ದು, ಕ್ಷೇತ್ರಗಳಲ್ಲಿ 10 ರಿಂದ 15 ಸಾವಿರ ಮತದಾರರು ಮಾತ್ರ ಇದ್ದಾರೆ. ಗೋವಾದಲ್ಲಿ ಕೂಡ ಇದೇ ಪರಿಸ್ಥಿತಿ ಇದೆ. ತಮ್ಮ ಸಂಸ್ಕøತಿ ಮತ್ತು ಸಂಸ್ಕಾರವನ್ನು ಉಳಿಸಿಕೊಳ್ಳಲು ಇವುಗಳೆಲ್ಲವು ಸ್ವತಂತ್ರ್ಯವಾಗಿವೆ. ಕೊಡವರಿಗೆ ಎಸ್‍ಟಿ ಟ್ಯಾಗ್ ಬೇಕಿರುವುದು ಉದ್ಯೋಗ ಮೀಸಲಾತಿ ಅಥವಾ ಇನ್ಯಾವುದೋ ಕಾರಣಕ್ಕಾಗಿ ಅಲ್ಲ, ಬದಲಿಗೆ ಎಲ್ಲರು ಸರಿಸಮಾನವಾಗಿ ನೋಡಲಿ, ಸಂಸ್ಕೃತಿ ಉಳಿಯಲಿ ಎನ್ನುವ ಕಾರಣಕ್ಕಾಗಿ ಬೇಕಾಗಿದೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರ ಸಹಕಾರ ಪಡೆದು ಎಸ್‍ಟಿ ಟ್ಯಾಗ್ ಪಡೆಯಿರಿ ಎಂದು ಬಿ.ಕೆ.ಹರಿಪ್ರಸಾದ್ ಸಲಹೆ ನೀಡಿದರು.
ಕೊಡವ ಲ್ಯಾಂಡ್ ಪೂರ್ವಜರು ನೀಡಿದ ಭೂಮಿಯಾಗಿದೆ, ಇದಕ್ಕೆ ಲ್ಯಾಂಡ್ ಓನರ್ ಎಂದು ಯಾರೂ ಇಲ್ಲ. ಧರ್ಮ ಪ್ರಭುತ್ವ ಮತ್ತು ರಾಜ ಪ್ರಭುತ್ವದ ಕಾಲಘಟ್ಟವನ್ನು ದಾಟಿ ಈಗ ಪ್ರಜಾಪ್ರಭುತ್ವದಲ್ಲಿ ನಾವಿದ್ದೇವೆ. ಸಂಪೂರ್ಣ ಅಧಿಕಾರ ಒಬ್ಬರ ಬಳಿಯೇ ಇರಬಾರದು, ಪ್ರತಿಯೊಬ್ಬನಿಗೂ ಹಕ್ಕಿದೆ ಎಂದು ದೇಶದ ಸಂವಿಧಾನ ಹೇಳುತ್ತದೆ. ಸಂವಿಧಾನವೇ ಧರ್ಮ ಗ್ರಂಥ ಎಂದುಕೊಂಡಾಗ ಮಾತ್ರ ಸಣ್ಣ ಸಣ್ಣ ಜಾತಿ, ಧರ್ಮಗಳು ಗೌರವಯುತವಾಗಿ ಜೀವಿಸಲು ಸಾಧ್ಯ ಎಂದರು.
ಕೊಡವರು ರಾಜಕೀಯ ಪ್ರಜ್ಞಾವಂತಿಕೆ ಮೂಡಿಸಿಕೊಳ್ಳಬೇಕು, ಕೊಡವ ಭೂಮಿ, ಸಂಸ್ಕøತಿ, ಆಚಾರ ವಿಚಾರ, ಪರಂಪರೆಯನ್ನು ಉಳಿಸಿ ಬೆಳೆಸುವವರನ್ನು ಬೆಂಬಲಿಸಬೇಕು. ಸಂವಿಧಾನ ಪ್ರತಿ ಐದು ವರ್ಷಕ್ಕೊಮ್ಮೆ ನಿಮ್ಮ ಶಕ್ತಿಯನ್ನು ಬಳಕೆ ಮಾಡಲು ಅವಕಾಶ ನೀಡಿದೆ. ಮತ ಚಲಾಯಿಸುವಾಗ ಸರಿಯಾದ ನಿರ್ಧಾರವನ್ನು ಮಾಡಬೇಕು. ಪ್ರತಿಯೊಬ್ಬರು ಸಂವಿಧಾನದ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ, ಚುನಾವಣಾ ಜಾಗೃತಿಯ ಅನಿವಾರ್ಯತೆ ಇದೆ ಎಂದು ಹೇಳಿದರು.
ತೋಟಗಳಲ್ಲಿ ರಕ್ತ, ಬೆವರು ಸುರಿಸಿ ದುಡಿದು ಸಂಪಾದಿಸುವ ಹಣದಲ್ಲಿ ನೀವುಗಳು ಪಾವತಿಸುವ ತೆರಿಗೆಯಿಂದ ಸರ್ಕಾರದ ಖಜಾನೆ ತುಂಬುತ್ತದೆ. ಈ ಹಣದಿಂದಲೇ ಭಾಷೆಯೊಂದರ ಬೆಳವಣಿಗೆಗೆ ಎಂದು 600 ಕೋಟಿ ರೂ.ಗಳನ್ನು ಸರ್ಕಾರ ಮೀಸಲಿಟ್ಟಿದೆ. ಆದರೆ ಕೊಡವ, ತುಳು ಭಾಷೆಯ ಪರ ಅಧಿವೇಶನಗಳಲ್ಲಿ ನಾನು ಚರ್ಚಿಸಿ ಸಾಕಾಗಿದೆ, ಪ್ರಯೋಜನವಾಗಿಲ್ಲ ಎಂದು ಬಿ.ಕೆ.ಹರಿಪ್ರಸಾದ್ ಬೇಸರ ವ್ಯಕ್ತಪಡಿಸಿದರು.
ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ನಡೆದ “ತೋಕ್ ನಮ್ಮೆ” ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಎ.ಎಸ್.ಪೊನ್ನಣ್ಣ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.









