ಮಡಿಕೇರಿ ಡಿ.19 : ಹುತ್ತರಿ ಹಬ್ಬದ ಪ್ರಯುಕ್ತ ಮರಗೋಡಿನ ನೂರೊಕ್ಲು ಊರೋರ್ಮೆ ಕೂಟದ ವತಿಯಿಂದ 50ನೇ ವರ್ಷದ ಸುವರ್ಣ ಸಂಭ್ರಮದ ಸಂತೋಷ ಕೂಟ ನಡೆಯಿತು.
ಸಂಘದಲ್ಲಿ ನಡೆದ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಸ್ಥಾಪಕ ಸದಸ್ಯ ಕಾನಡ್ಕ ದಾಮೋದರ್, 1972ರಲ್ಲಿ ಸ್ಥಾಪಿತವಾದ ನೂರೊಕ್ಲು ಊರೋರ್ಮೆ ಕೂಟ ಎಲ್ಲರ ಸಹಕಾರದಿಂದ ಇಂದು ದೊಡ್ಡ ರೀತಿಯಲ್ಲಿ ಬೆಳವಣಿಗೆಯನ್ನು ಕಂಡಿರುವುದು ಹೆಮ್ಮೆಯ ವಿಚಾರ. ಸಂಘ 100 ವರ್ಷಗಳನ್ನು ಪೂರೈಸಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಹಿರಿಯರಾದ ಕಾನಡ್ಕ ಚಿರಾಮಣಿ ಅಪ್ಪಾಜಿ, ಅಂದಿನ ಹಿರಿಯರು ಕಟ್ಟಿಬೆಳೆಸಿದ ಸಂಘವನ್ನು ಮುಂದುವರೆಸಿಕೊಂಡು ಬಂದು 50 ವರ್ಷವನ್ನು ಪೂರೈಸಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಜನರು ಒಗ್ಗಟ್ಟಿನಿಂದ, ಶಾಂತಿ ಸಹಬಾಳ್ವೆಯಿಂದಿರಲು ಸಹಕಾರಿಯಾಗಿದೆ ಎಂದರು.
ಹಿರಿಯ ಸದಸ್ಯರಾದ ಅಯ್ಯಂಡ್ರ ಅಪ್ಪಯ್ಯ ಮಾತನಾಡಿ, ಹಿಂದಿನ ದಿನಗಳಲ್ಲಿ ಹುತ್ತರಿ ಹಬ್ಬದ ಪ್ರಯುಕ್ತ ಹಲವು ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ ಪ್ರಸ್ತುತ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ನಶಿಸಿ ಹೋಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಆಚಾರ, ವಿಚಾರ, ಪದ್ಧತಿ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಆಸಕ್ತಿ ತೋರಬೇಕಾಗಿದೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಐಯ್ಯಂಡ್ರ ಉತ್ತಯ್ಯ ಅವರು ಎಲ್ಲಾ ಸದಸ್ಯರ ಸಹಕಾರದಿಂದ ಸಂಘವು 50 ವರ್ಷಗಳನ್ನು ಪೂರೈಸಲು ಸಾಧ್ಯವಾಯಿತು ಎಂದು ಹೇಳಿದರು.
ಹಿರಿಯ ಸದಸ್ಯರಾದ ಕೆಂಜನ ಬೆಳ್ಯಪ್ಪ, ಎಂ.ಎಸ್.ವೆಂಕಪ್ಪ ಹಾಗೂ ಕಾನಡ್ಕ ಉತ್ತಪ್ಪ ಉಪಸ್ಥಿತರಿದ್ದರು.
ಕಾನಡ್ಕ ಪವನ್ ಪ್ರಾರ್ಥಿಸಿ, ಪಾಂಡನ ವಿವೇಕಾನಂದ ಸ್ವಾಗತಿಸಿ, ಕಾನಡ್ಕ ಹನೀಶ್ ನಿರೂಪಿಸಿ, ಐಯ್ಯಂಡ್ರ ಶ್ರೀನಿವಾಸ್ ವಂದಿಸಿದರು. ಸಂತೋಷ ಕೂಟದಲ್ಲಿ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ಇದೇ ಸಂದರ್ಭ ಸಂಘದ ಅಗಲಿದ ಸದಸ್ಯರಿಗೆ ಸಭೆ ಸಂತಾಪ ಸೂಚಿಸಿತು.









