ಮಡಿಕೇರಿ ಡಿ.19 : ಸಮಗ್ರ ಕಾರ್ಯಯೋಜನೆಗಳಿಗಾಗಿ ಕೊಡಗು ಜಿಲ್ಲೆಯ ಭಾರತೀಯ ರೆಡ್‍ಕ್ರಾಸ್ ಘಟಕಕ್ಕೆ ರಾಜ್ಯದಲ್ಲಿಯೇ ಅತ್ಯುತ್ತಮ ರೆಡ್‍ಕ್ರಾಸ್ ಪ್ರಶಸ್ತಿ ದೊರಕಿದೆ.
ಬೆಂಗಳೂರಿನ ರಾಜಭವನದಲ್ಲಿ ನಡೆದ ಭಾರತೀಯ ರೆಡ್‍ಕ್ರಾಸ್‍ನ ಕರ್ನಾಟಕ ರಾಜ್ಯ ಘಟಕದ ವಾರ್ಷಿಕ ಮಹಾಸಭೆಯಲ್ಲಿ ಕರ್ನಾಟಕ ರೆಡ್‍ಕ್ರಾಸ್‍ನ ಸಭಾಧ್ಯಕ್ಷರಾಗಿರುವ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರು ಪ್ರಶಸ್ತಿಯನ್ನು ಕೊಡಗು ಘಟಕದ ಸಭಾಪತಿ ಬಿ.ಕೆ.ರವೀಂದ್ರ ರೈ ಅವರಿಗೆ ವಿತರಿಸಿದರು.
ಈ ಸಂದರ್ಭ ಕರ್ನಾಟಕ ರೆಡ್‍ಕ್ರಾಸ್ ಸಭಾಪತಿ ವಿಜಯ್ ಕುಮಾರ್ ಪಾಟೀಲ್, ಉಪಾಧ್ಯಕ್ಷ ಆನಂದ್ ಎಸ್. ಜಿಗಜಿಣಗಿ, ಕೊಡಗು ಯೂತ್ ರೆಡ್‍ಕ್ರಾಸ್ ನಿರ್ದೇಶಕ ಎಂ.ಧನಂಜಯ್ ಹಾಜರಿದ್ದರು.

ಕೋವಿಡ್ ಸಂದರ್ಭದಲ್ಲಿ ಸಂತ್ರಸ್ತರಿಗೆ ಪರಿಹಾರ ವಿತರಣೆ, ರಕ್ತದಾನದ 10 ಶಿಬಿರಗಳು, ರೆಡ್‍ಕ್ರಾಸ್ ಸಭಾಭವನ ನಿರ್ಮಾಣ, ಮಳೆಹಾನಿ ಸಂತ್ರಸ್ತರಿಗೆ ಪರಿಹಾರದ ಕಿಟ್ ವಿತರಣೆ, ವಿಕಲಾಂಗರಿಗೆ ನೆರವು, ದಿವ್ಯಾಂಗರಿಗೆ ತರಬೇತಿ ಶಿಬಿರ, 15 ಜೀವಾವಧಿ ಸದಸ್ಯರ ನೋಂದಣಿ, ಆರೋಗ್ಯ ಸಂಬಂಧಿತ 5 ಶಿಬಿರಗಳ ಆಯೋಜನೆ, ಪ್ರಥಮ ಚಿಕಿತ್ಸೆ ಶಿಬಿರ ಆಯೋಜನೆ ಸೇರಿದಂತೆ ಅನೇಕ ಜನಸೇವಾ ಕಾರ್ಯ ಯೋಜನೆಗಳನ್ನು ರಾಜ್ಯದಲ್ಲಿಯೇ ಅತ್ಯಧಿಕ ಸಂಖ್ಯೆಯಲ್ಲಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಕೊಡಗು ಘಟಕವು ಅನುಷ್ಠಾನಗೊಳಿಸಿದೆ. ಈ ಹಿನ್ನಲೆಯಲ್ಲಿ ರಾಜ್ಯ ಘಟಕವು ಸರ್ವಾಂಗೀಣ ಸಾಧನೆಗಳಿಗಾಗಿ ಕೊಡಗು ಘಟಕಕ್ಕೆ ಅತ್ಯುತ್ತಮ ಘಟಕ ಎಂದು ಪ್ರಶಸ್ತಿ ನೀಡಿ ಗೌರವಿಸಿದೆ.








