ನಾಪೋಕ್ಲು ಡಿ.20 : ಕಾಫಿ ಬೆಳೆಗಾರರಿಗೆ ತೆರೆದ ಬಾವಿ, ಕಣ ನಿರ್ಮಾಣ , ಕೆರೆ ನಿರ್ಮಾಣ ಹಾಗೂ ಪಂಪ್ ಸೆಟ್ ಅಳವಡಿಸಲು ಕಾಫಿ ಮಂಡಳಿಯಿಂದ ರಿಯಾಯಿತಿ ದರದಲ್ಲಿ ಸಬ್ಸಿಡಿ ನೀಡಲಾಗುವುದು. ಇದನ್ನು ಬೆಳೆಗಾರರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಭಾರತ ಸರ್ಕಾರದ ಕಾಫಿ ಮಂಡಳಿಯ ನಿರ್ದೇಶಕ ತಳೂರು ಎ .ಕಿಶೋರ್ ಕುಮಾರ್ ಹೇಳಿದರು.
ಬೆಟ್ಟಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಕಾಫಿ ಮಂಡಳಿ ವತಿಯಿಂದ ರೈತರಿಗೆ ಆಯೋಜಿಸಲಾಗಿದ್ದ ಕಾಫಿ, ಕಾಳು ಮೆಣಸು ಮತ್ತು ಹಣ್ಣು ಹಂಪಲುಗಳ ತೋಟಗಾರಿಕೆ ಬೆಳೆಗಳ ಬಗ್ಗೆ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಫಿ ಮಂಡಳಿ ವತಿಯಿಂದ ಬೆಳೆಗಾರರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ .ಕಾಫಿ ಬೆಳೆ ಮಾಡಲು ಮಿನಿ ಹಲ್ಲರ್ ಗಳನ್ನು ರೈತರ ಅನುಕೂಲಕ್ಕಾಗಿ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ .ಎಲ್ಲಾ ಸಬ್ಸಿಡಿಗಳ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಸೂಚಿಸಿದರು.
ಕಾರ್ಯಕ್ರಮದಲ್ಲಿ ರೈತರು ತೋಟಕ್ಕೆ ಯಾವ ಪ್ರಮಾಣದಲ್ಲಿ ಗೊಬ್ಬರ ಹಾಕಬೇಕು ಮತ್ತು ಮಣ್ಣು ಪರೀಕ್ಷೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.ಕಾರ್ಯಕ್ರಮದಲ್ಲಿ ಕಾಫಿ ಮಂಡಳಿಯ ಸಹಾಯಕ ನಿರ್ದೇಶಕ ಚಂದ್ರಶೇಖರ್, ಅಪ್ಪಂಗಳದ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಕೇಂದ್ರದ ವಿಜ್ಞಾನಿ ಅಂಕೆ ಗೌಡ, ಚೆಟ್ಟಳ್ಳಿ ತೋಟಗಾರಿಕಾ ಇಲಾಖೆಯ ವಿಜ್ಞಾನಿ ಡಾ. ಮುರುಳಿಧರ್ , ಕಾಫಿ ಮಂಡಳಿಯ ನಡಾಫ್, ಸದಾಶಿವ ರಾವ್ , ನಾಗರಾಜ್ ಕಾವಿ , ಡಾ. ಮಂಜುನಾಥ್ ರೆಡ್ಡಿ, ಬೆಟ್ಟಗೇರಿ ಗ್ರಾ.ಪಂ ಅಧ್ಯಕ್ಷ ಚಳಿಯ೦ಡ ಕಮಲ ಉತ್ತಯ್ಯ , ಬೆಟ್ಟಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್ .ಆರ್ ಸುಶೀಲಾ ರೈ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬೆಟ್ಟಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಕೂಪದಿರ ದೊರೆ ಮಾದಪ್ಪ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ವರದಿ : ದುಗ್ಗಳ ಸದಾನಂದ








