ಮಡಿಕೇರಿ ಡಿ.20 : ಮಧ್ಯಪ್ರದೇಶದ ಇಂದೋರಿನಲ್ಲಿ ನಡೆದ ಅಖಿಲ ಭಾರತ ಔಷದ ವ್ಯಾಪಾರಿಗಳ ಸಂಘದ ಸರ್ವಸದಸ್ಯರ ಮಹಾಸಭೆಯಲ್ಲಿ ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಗೌರವ ಕಾರ್ಯದರ್ಶಿಯಾಗಿರುವ ಅಂಬೇಕಲ್ ಜೀವನ್ ಅವರು ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘವು ಮುಂಬೈನಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದ್ದು, ಅಲ್ಲಿಂದ ಅಖಿಲ ಭಾರತ ಮಟ್ಟದಲ್ಲಿ ಕಾರ್ಯಾಚರಿಸುತ್ತಿದೆ. ಇದು ಅಖಿಲ ಭಾರತ ಮಟ್ಟದಲ್ಲಿ ಅತ್ಯಂತ ಹೆಚ್ಚಿನ (ಸುಮಾರು 13 ಲಕ್ಷ) ಸದಸ್ಯರನ್ನು ಹೊಂದಿರುವ ಏಕೈಕ ಸಂಸ್ಥೆಯಾಗಿದೆ.
ಕಳೆದ ಹಲವಾರು ದಶಕಗಳಿಂದ ಔಷಧ ವ್ಯಾಪಾರಿಗಳ ಕ್ಷೇಮಭಿವೃದ್ಧಿಗಾಗಿ ಮತ್ತು ಔಷಧ ವ್ಯಾಪಾರಿಗಳ ಅನೇಕ ಮೂಲ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುವ ಮೂಲಕ ತನ್ನನ್ನು ಗುರುತಿಸಿಕೊಂಡಿದೆ.














