ಗೋಣಿಕೊಪ್ಪಲು.ಡಿ.20: ಕೊಡವರ ಕಲೆ, ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿ , ಪರಂಪರೆ ಉಳಿಸುವ ನಿಟ್ಟಿನಲ್ಲಿ ಸರ್ವರು ಸಹಕಾರ ನೀಡುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ತಿಂಗಳಿಗೊಂದು ಹೆಜ್ಜೆಯೆಂಬಂತೆ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಕಲೆಯನ್ನು ಉಳಿಸಲು ಎಲ್ಲಾ ಪ್ರಯತ್ನ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಪೊಂಬೊಳ್ಚ ಕೂಟ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಕೂಟದ ಜಿಲ್ಲಾಧ್ಯಕ್ಷ ಮಾಳೆಟಿರ ಶ್ರೀನಿವಾಸ್ ಅಭಿಪ್ರಾಯ ಪಟ್ಟರು.
ಗೋಣಿಕೊಪ್ಪಲುವಿನ ಇಗ್ಗುತ್ತಪ್ಪ ಕೊಡವ ಸಂಘದ ಸಭಾಂಗಣದಲ್ಲಿ ಪೊಂಬೊಳ್ಚ ಕೂಟದಿಂದ ಆಯೋಜನೆಗೊಂಡಿದ್ದ ಜಿಲ್ಲಾ ಮಟ್ಟದ ಕವಿಗೋಷ್ಠಿಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊಡವ ಕವಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದರೂ ಇವರಿಗೆ ವೇದಿಕೆಗಳು ಲಭಿಸುತ್ತಿಲ್ಲ. ಹೀಗಾಗಿ ಕವಿಗಳಿಗೆ ವೇದಿಕೆ ನೀಡುವ ಕಾರ್ಯಕ್ರಮ ಪೊಂಬೊಳ್ಚ ಕೂಟದಿಂದ ನಡೆಯುತ್ತಿದೆ. ಆ ಮೂಲಕ ಕಲೆ ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
ಮುಂದಿನ ವರ್ಷದಿಂದ ನಾಪೋಕ್ಲು ಕೊಡವ ಸಮಾಜದಿಂದ ಕಾರ್ಯಕ್ರಮಗಳನ್ನು ಆರಂಭಿಸಲಾಗುವುದು ಈ ಕಾರ್ಯಕ್ರಮದಲ್ಲಿ ಕೊಡವರ ಪದ್ಧತಿ, ಪರಂಪರೆಯ ಭಾಗವಾಗಿರುವ ದುಡಿಕೊಟ್ಟ್ , ಬಾಳೋಪಾಟ್ ಬೊಳಕಾಟ್‌ಗಳನ್ನು ಮಕ್ಕಳಿಗೆ ಕಲಿಸುವ ಕಾರ್ಯಕ್ರಮ ಆರಂಭ ಮಾಡಲಾಗುವುದು. ನಂತರ ವಿರಾಜಪೇಟೆ ಕೊಡವ ಸಮಾಜ, ಸೇರಿದಂತೆ ಜಿಲ್ಲೆಯ ಅಮ್ಮತ್ತಿ, ಕುಶಾಲನಗರ ಹಾಗೂ ಇತರ ಕೊಡವ ಸಮಾಜಗಳಲ್ಲಿ ಈ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು. ಕಾರ್ಯಕ್ರಮಕ್ಕೆ ತಮ್ಮಲ್ಲಿನ ಮಕ್ಕಳನ್ನು ಸಕ್ರೀಯವಾಗಿ ಭಾಗವಹಿಸುವಂತೆ ಮಾಡಬೇಕು ಎಂದರು.
ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ ಸಾಹಿತಿ ಮಂಡೇಪಂಡ ಗೀತಾಮಂದಣ್ಣ ಮಾತನಾಡಿ, ಕವಿ, ಸಾಹಿತ್ಯ ಹಾಗೂ ಅಕ್ಷರ ಸರಸ್ವತಿ ಕೊಟ್ಟಂತಹ ದೊಡ್ಡವರ. ಇದು ಎಲ್ಲರಿಗೂ ಅರ್ಥವಾಗುತ್ತಿಲ್ಲ. ಬದುಕಿನಲ್ಲಿ ಇದು ಪ್ರಾಮುಖ್ಯತೆ ವಹಿಸಿದೆ. ಮನಸಿನ ಭಾವನೆಗಳನ್ನು ಬರೆಯುವ ಅಭ್ಯಾಸ ಎಲ್ಲಾರು ರೂಡಿಸಿಕೊಳ್ಳಬೇಕು. ಇದರಿಂದ ಮನೆಯಲ್ಲಿರುವ ಹಿರಿಯರಿಗೆ ಹೆಚ್ಚಿನ ಮನಸ್ಥೈರ್ಯ ಸಿಕ್ಕಿದಂತಾಗುತ್ತದೆ. ಕವಿಗಳಿಗೆ ಅಪ್ಪನೆರವಂಡ ಹರಿದಾಸ ಅಪ್ಪಚ್ಚಕವಿ ಸ್ಫೂರ್ತಿಯಾಗಿದ್ದಾರೆ. ಇವರು ಹೆಸರಾಂತ ಕವಿಗಳಾಗಿದ್ದು ಇವರು ಹಾಕಿಕೊಟ್ಟ ಮಾರ್ಗದಲ್ಲಿ ನಾವುಗಳು ಸಾಗಬೇಕು.ಅವರ ಕಾಲದಲ್ಲಿ ಸಾಕಷ್ಟು ಕಷ್ಟ ದಿನಗಳಿದ್ದವು ನಡೆದುಕೊಂಡೇ ಹಲವು ಮೈಲಿಗಳ ದೂರ ಸಾಗಬೇಕಿತ್ತು.

ಆ ಕಾಲದಲ್ಲಿ ಗುರು ಹಿರಿಯರಿಗೆ ಸಾಕಷ್ಟು ಗೌರವ ಲಭಿಸುತ್ತಿತ್ತು. ಆದರೆ ಇದೀಗ ಕಾಲ ಬದಲಾದಂತೆ ಎಲ್ಲಾ ಸೌಕರ್ಯಗಳನ್ನು ಹೊಂದಿದ್ದರೂ, ಹಿರಿಯರಿಗೆ ಗೌರವ ಸಿಗುತ್ತಿರುವುದು ಕಡಿಮೆಯಾಗುತ್ತಿದೆ ಎಂದು ಆತಂಕ ವ್ಯಕ್ತ ಪಡಿಸಿದರು. ಹೊರ ದೇಶದಲ್ಲಿ ಉದ್ಯೋಗದಲ್ಲಿದ್ದು ಸಾಕಷ್ಟು ಸಂಪಾದನೆ ಇದ್ದರೂ ಹೆತ್ತವರನ್ನು ವೃದ್ಧಾಶ್ರಮದಲ್ಲಿ ಬಿಡುವಂತಹ ಪರಿಸ್ಥಿತಿ ಸರಿಯಲ್ಲ ಎಂದರು.
ಪೊಂಬೊಳ್ಚ ಕೂಟದ ಸ್ಥಾಪಕ ಅಧ್ಯಕ್ಷ ಕೋಟಿತ ಉದಯ್ ಪೂಣಚ್ಚ ಮಾತನಾಡಿ, ಬರಹಗಾರರನ್ನು ಗುರುತಿಸಿ ಅವರಿಗೆ ವೇದಿಕೆಗಳನ್ನು ಕೂಟದ ವತಿಯಿಂದ ನೀಡುತ್ತಿದ್ದೇವೆ. ಇದರಿಂದ ಕೊಡವ ಬರಹಗಳು ಹೆಚ್ಚಾಗಲು ಕಾರಣವಾಗುತ್ತಿದೆ. ಪುಸ್ತಕ ಬರೆಯುತ್ತಿರುವ ಬರಹಗಾರರಿಗೆ ಮುಂದಿನ ದಿನದಲ್ಲಿ ಕೂಟದ ವತಿಯಿಂದ ಸಹಕಾರ ನೀಡಲಾಗುವುದು. ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ತಮ್ಮಲ್ಲಿರುವ ಬರಹಗಳು ಹೆಚ್ಚಾಗಿ ಮೂಡಿಬರುವಂತಾಗಲಿ ಎಂದರು.
ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪೊಂಬೊಳ್ಚ ಕೂಟದ ಉಪಾಧ್ಯಕ್ಷರಾದ ಕಿಕ್ಕೇರಿಯಂಡ ಲೀಲಾ ಅಯ್ಯಪ್ಪ, ಪ್ರತಿನಿತ್ಯ ಬಿಡುವಿನ ಸಮಯದಲ್ಲಿ ಕಲೆ ಹಾಗೂ ಸಂಸ್ಕೃತಿಯ ಬಗ್ಗೆ ಬರಹಗಳು ಮೂಡಿ ಬರುವಂತಾಗಲಿ ಎಂದರು.
ಜಿಲ್ಲೆಯ ವಿವಿಧ ಭಾಗದಿಂದ 25ಕ್ಕೂ ಅಧಿಕ ಕವಿಗಳು ಆಗಮಿಸಿ ಕವಿತೆ ಮಂಡಿಸಿದರು. ಕುಶಾಲನಗರದ ಕೊಡವ ಸಮಾಜದಿಂದ ಉಮ್ಮತ್ತಾಟ್ ಕಾರ್ಯಕ್ರಮವು ಗಮನ ಸೆಳೆಯಿತು. ವೇದಿಕೆಯಲ್ಲಿ ಕಾರ್ಯಕ್ರಮದ ಪೊಂಬೊಳ್ಚ ಕೂಟದ ಸದಸ್ಯೆ, ಕಾರ್ಯಕ್ರಮದ ಸಂಚಾಲಕಿ ಮಲ್ಟಿರ ಯಶೋಧ ದೇವಯ್ಯ ಉಪಸ್ಥಿತರಿದ್ದರು.
ಕವಿಗಳಿಗೆ ಸಾಹಿತಿಗಳು ನೀಡಿದ ಪುಸ್ತಕದೊಂದಿಗೆ ನೆನಪಿನ ಕಾಣಿಕೆ ನೀಡಲಾಯಿತು. ಆರಂಭದಲ್ಲಿ ಚೋವಂಡ ಜಮುನ ಸುರೇಶ್ ಪ್ರಾರ್ಥಿಸಿ ಪೊಂಬೊಳ್ಚ ಕೂಟದ ಚ0ಗೇಟಿನ ಸೋಮಣ್ಣ, ಅಜ್ಜಿಕುಟ್ಟಿರ ಭವ್ಯ ಬೋಪಣ್ಣ, ಕಾರ್ಯಕ್ರಮ ನಿರೂಪಿಸಿದರು, ಮುಂಡೋಳಂಡ ಧರಣಿ ಜಗದೀಶ್ ಸ್ವಾಗತಿಸಿದರು, ಕಾರ್ಯಕ್ರಮದ ಸಂಚಾಲಕಿ ಮಲ್ಟಿರ ಯಶೋಧ ದೇವಯ್ಯ ವಂದಿಸಿದರು.
ವರದಿ : ಹೆಚ್.ಕೆ.ಜಗದೀಶ್








