ಸೋಮವಾರಪೇಟೆ ಡಿ.21 : ಕಾಫಿ ಬೆಳೆಗಾರರ 10ಎಚ್‍ಪಿ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡಬೇಕು. ಡಿಬಿಟಿ ಯೋಜನೆಯನ್ನು ಕೈಬಿಡಬೇಕು. ಬೆಳೆಗಾರರ ಬಾಕಿ ವಿದ್ಯುತ್ ಬಿಲ್ ಮನ್ನಾ ಮಾಡಬೇಕೆಂದು ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಕಾಫಿ ಬೆಳೆಗಾರರು ಪುಟ್ಟಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಬೆಳೆಗಾರರು ಮಾನವ ಸರಪಳಿ ನಿರ್ಮಿಸಿ, ವಿದ್ಯುತ್ ಮೀಟರ್ ಹಾಗು ಬಿಲ್‍ಗಳಿಗೆ ಬೆಂಕಿ ಕೊಟ್ಟು ಅಕ್ರೋಶ ವ್ಯಕ್ತಪಡಿಸಿ, ಇಂಧನ ಸಚಿವರು ಮತ್ತು ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ರಾಜ್ಯ ಸರ್ಕಾರ ಕೊಡಗು ಜಿಲ್ಲೆಗೆ ಅನ್ಯಾಯ ಮಾಡುತ್ತಿದೆ. ಮಲತಾಯಿ ಧೋರಣೆ ಎಸಗುತ್ತಿದೆ ಎಂದು ಪ್ರತಿಭಟನಾಕಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಕೊಡಗಿನಲ್ಲಿ ರೈತರೇ ಕಾಫಿ ಬೆಳೆಯುತ್ತಿದ್ದಾರೆ. ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ ರೈತರ ಸಾಲ ಮನ್ನಾ ಮಾಡುವುದು ಬಿಟ್ಟು, ಪಂಪ್‍ಸೆಟ್‍ಗಳ ವಿದ್ಯುತ್ ಬಿಲ್ ಕಟ್ಟಿ ಇಲ್ಲಂದ್ರೆ, ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತೇವೆ ಎಂದು ಬೆದರಿಕೆ ಹಾಕುವ ನೋಟಿಸ್ ಮಾಡುತ್ತಿದ್ದಾರೆ. ಇದು ಕೊಡಗಿನ ಜನರಿಗೆ ಮಾಡುತ್ತಿರುವ ಅನ್ಯಾಯ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಕೊಡಗಿನ ಕಾಫಿ ಬೆಳೆಗಾರರು ಕಾಫಿ ಉತ್ಪಾದಿಸುವಯದಕ್ಕೆ ವಿದ್ಯುತ್ ಬಳಸಿರುವುದು. ಉಚಿತ ವಿದ್ಯುತ್ ಕೇಳುತ್ತಿರುವುದು. ಗಾಂಜಾ ಬೆಳೆಯುವುದಕ್ಕೆ ಅಲ್ಲ. ಕಾಫಿ ವಿದೇಶಿ ವಿನಿಮಯ ಹಾಗೂ ತೆರಿಗೆಯಿಂದ ಸಾವಿರಾರು ಕೋಟಿ ರೂ. ಅದಾಯವನ್ನು ಕೇಂದ್ರ ಹಾಗು ರಾಜ್ಯ ಸರ್ಕಾರಗಳು ತಿನ್ನುತ್ತಿವೆ. ಕೇವಲ 23 ಕೋಟಿ ರೂ.ಗಳ ಪಂಪ್‍ಸೆಟ್‍ಗಳ ಬಾಕಿ ವಿದ್ಯುತ್ ಬಿಲ್‍ನ್ನು ಮನ್ನಾ ಮಾಡಲು ಕಷ್ಟವಲ್ಲ ಎಂದರು. ಕಳೆದ 5 ವರ್ಷಗಳಿಂದ ಅಕಾಲಿಕ ಮಳೆ, ಮುಂಗಾರು ವಿಳಂಬ, ಅತೀವೃಷ್ಠಿಯಿಂದ ಕಾಫಿ ಹಾನಿಯಾಗಿದೆ. ವಾಣಿಜ್ಯ ಬ್ಯಾಂಕ್, ಹಾಗೂ ಸಹಕಾರಿ ಸಂಘಗಳಲ್ಲಿ ಫಸಲು ಸಾಲವನ್ನು ಕಟ್ಟಲು ಸಾಧ್ಯವಾಗದೇ ಬಡ್ಡಿ ಮಾತ್ರ ಕಟ್ಟಲಾಗುತ್ತಿದೆ. ಮುಂಗಾರು ವಿಳಂಬದಿಂದ ಪಂಪ್‍ಸೆಟ್‍ಗಳ ಬಳಸಿ ನೀರು ಹರಿಸಿಕೊಂಡು ಕಾಫಿ ಉತ್ಪಾದನೆ ಮಾಡಲಾಗುತ್ತಿದೆ. ಎಲ್‍ಟಿ4 ಸಂಪರ್ಕಕ್ಕೆ ವಿಧಿಸಿರುವ ಅವೈಜ್ಞಾನಿಕ ಮಾಸಿಕ ಶುಲ್ಕ, ಬಿಲ್ ಮೇಲಿನ ಬಡ್ಡಿ, ಚಕ್ರಬಡ್ಡಿಯಿಂದ ಸಣ್ಣ ಕಾಫಿ ಬೆಳೆಗಾರರ ಪಂಪ್‍ಸೆಟ್‍ಗಳ ವಿದ್ಯುತ್ ಬಿಲ್ ಲಕ್ಷ ರೂ.ಗಳಷ್ಟು ದಾಟಿದೆ. ಬರಗಾಲದ ಸಂದರ್ಭದಲ್ಲಿ ಬಿಲ್ ಕಟ್ಟಲು ಸಾಧ್ಯವೇ ಇಲ್ಲ. ಸರ್ಕಾರ ವಿದ್ಯುತ್ ಬಿಲ್ ಮನ್ನಾ ಮಾಡಿ, ಯಾವುದೇ ಷರತ್ತುಗಳಿಲ್ಲದೆ ಉಚಿತ ವಿದ್ಯುತ್ ವಿದ್ಯುತ್ ನೀಡಬೇಕು. ಬೆಳೆಗಾರರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಮುಂದಾದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ದಿನೇಶ್ ಎಚ್ಚರಿಸಿದರು.
ಅಡಕೆ, ತೆಂಗು, ಭತ್ತ,ಕಬ್ಬು ಹೊಗೆಸೊಪ್ಪು ಸೇರಿದಂತೆ ಇನ್ನಿತರ ಬೆಳೆಗಳಿಗೆ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿದೆ. ಕಾಫಿ ಮಾದಕವಸ್ತು ಅಲ್ಲ.ಒಂದು ಪಾನೀಯವಾಗಿದೆ ಎಂಬುದನ್ನು ಇಂಧನ ಸಚಿವರು ತಿಳಿದುಕೊಳ್ಳಬೇಕು. ಅದೊಂದು ಆಹಾರ ಬೆಳೆಯಾಗಿದೆ. ತಾರಾತಮ್ಯ ಮಾಡದೆ ಉಚಿತ ವಿದ್ಯುತ್ ನೀಡಬೇಕು ಎಂದು ರೈತಸಂಘದ ಉಪಾಧ್ಯಕ್ಷ ಜಿ.ಎಂ.ಹೂವಯ್ಯ ಒತ್ತಾಯಿಸಿದರು. ರೈತರಿಗೆ ಉಚಿತ ವಿದ್ಯುತ್ ಕಲ್ಪಿಸಬೇಕೆಂದು ಮಡಿಕೇರಿ ಶಾಸಕರಾದ ಡಾ.ಮಂತರ್ ಗೌಡ, ಸಕಲೇಶಪುರ ಶಾಸಕ ಮಂಜು ಅವರು ಬೆಳಗಾವಿ ಅಧಿವೇಶನದಲ್ಲಿ ಒತ್ತಡ ಹಾಕಿದ್ದಾರೆ. ಮುಂದೇ ರೈತರ ಹೋರಾಟದ ಮುಂದಾಳತ್ವ ವಹಿಸಬೇಕು ಎಂದು ಮನವಿ ಮಾಡಿದರು. ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಯ ಬೆಳೆಗಾರರ ಬಾಕಿಯಿರುವ ವಿದ್ಯುತ್ ಬಿಲ್ ಮೊತ್ತ ಕೇವಲ 43 ಕೋಟಿ ರೂ. ಅದನ್ನು ಮನ್ನಾ ಮಾಡಿ ಕಾಫಿ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ರೈತ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಲಿಂಗೇರಿ ರಾಜೇಶ್, ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್.ಎಂ.ಸೋಮಪ್ಪ, ರೈತ ಮುಖಂಡರಾದ ಬಗ್ಗನ ಅನಿಲ್, ಮಚ್ಚಂಡ ಅಶೋಕ್, ಎ.ಆರ್.ಕುಶಾಲಪ್ಪ, ಗಣಗೂರು ಚಂದ್ರಶೇಖರ್, ಸುಳಿಮಳ್ತೆ ದಿವಾಕರ್, ಗೌಡಳ್ಳಿ ಸುನಿಲ್, ಎಚ್.ಬಿ.ರಾಜಪ್ಪ, ಸಿ.ಕೆ.ರೋಹಿತ್, ಮಳ್ತೆ ವೀರೇಶ್ ಮತ್ತಿತರು ಇದ್ದರು.








