ಮಡಿಕೇರಿ ಡಿ.21 : ಮಡಿಕೇರಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಪೌರಾಯುಕ್ತ ವಿಜಯ ಅವರ ವಿರುದ್ಧ ಅಸಮಾಧಾನ ಸ್ಫೋಟಗೊಂಡಿತು. ನಗರಸಭಾ ಆಡಳಿತ ಸಂಪೂರ್ಣವಾಗಿ ವಿಫಲಗೊಂಡಿದ್ದು, ಸಾರ್ವಜನಿಕರಿಗೆ ನ್ಯಾಯ ದೊರಕಿಸಲು ಸಾಧ್ಯವಾಗುತ್ತಿಲ್ಲವೆಂದು ಸದಸ್ಯರು ಅಸಹಾಯಕತೆ ವ್ಯಕ್ತಪಡಿಸಿದರು. ವ್ಯವಸ್ಥೆಯ ಸುಧಾರಣೆಗೆ ಅಧ್ಯಕ್ಷೆ ಅನಿತಾ ಪೂವಯ್ಯ ಅವರಿಗೆ ಪಕ್ಷಾತೀತವಾಗಿ ಬೆಂಬಲ ಸೂಚಿಸುವ ಮೂಲಕ ಸದಸ್ಯರು ಒಗ್ಗಟ್ಟು ಪ್ರದರ್ಶಿಸಿದರು.
ನಗರಸಭಾ ಸಭಾಂಗಣದಲ್ಲಿ ಅಧ್ಯಕ್ಷೆ ಅನಿತಾ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳಲ್ಲಿ ಅಧಿಕಾರಿಗಳು ತೋರುತ್ತಿರುವ ಅಸಹಕಾರ ಮನೋಭಾವದ ಕುರಿತು ಸದಸ್ಯರುಗಳು ವಾಗ್ಧಾಳಿ ನಡೆಸಿದರು.
ವಿರೋಧ ಪಕ್ಷ ಎಸ್‍ಡಿಪಿಐ ನ ಸದಸ್ಯರುಗಳಾದ ಅಮಿನ್ ಮೊಹ್ಸಿನ್ ಹಾಗೂ ಎಂ.ಕೆ.ಮನ್ಸೂರ್ ಆಲಿ ಮಾತನಾಡಿ ಮಾರುಕಟ್ಟೆ ಬಳಿ 8 ತಾತ್ಕಾಲಿಕ ಮಳಿಗೆಗಳ ನಿರ್ಮಾಣಕ್ಕೆ ರಿ-ಟೆಂಡರ್ ಪ್ರಕ್ರಿಯೆ ನಡೆಸದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ.ಸತೀಶ್, ಪೌರಾಯುಕ್ತರು ಆಸಕ್ತಿ ವಹಿಸಿ ರಿ-ಟೆಂಡರ್ ಮಾಡಬೇಕಾಗಿತ್ತು. ಆದರೆ ನಗರಸಭಾ ಕಚೇರಿಯಲ್ಲಿ ಅಧಿಕಾರಿಗಳೇ ಇರುವುದಿಲ್ಲ. ರಜೆ ಅಥವಾ ಕೋರ್ಟ್ ಎಂದು ಕಾರಣ ನೀಡುತ್ತಾರೆ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ದೊರೆಯುತ್ತಿಲ್ಲವೆಂದು ಆರೋಪಿಸಿದರು.
ಆಡಳಿತ ಪಕ್ಷ ಬಿಜೆಪಿ ಸದಸ್ಯ ಉಮೇಶ್ ಸುಬ್ರಮಣಿ ಮಾತನಾಡಿ, ಬೇಕಂತಲೇ ಸಾರ್ವಜನಿಕರಿಗೆ ನಗರಸಭೆಯಲ್ಲಿ ಕಿರುಕುಳವಾಗುತ್ತಿದೆ, ಇದಕ್ಕೆ ಸದಸ್ಯರುಗಳಾದ ನಾವು ಹಾಗೂ ಅಧಿಕಾರಿಗಳೇ ಹೊಣೆ. ಹಣವಿದ್ದರೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಆರಂಭದಲ್ಲಿ ಉತ್ಸಾಹದಿಂದ ಕೆಲಸ ಮಾಡಿದ ಪೌರಾಯುಕ್ತರು ಇತ್ತೀಚಿನ ದಿನಗಳಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ. ಜನರಿಗೆ ಸೌಲಭ್ಯಗಳು ಸುಲಭವಾಗಿ ಸಿಗಬೇಕೆಂದು ಸರ್ಕಾರ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಡುತ್ತಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಮತ್ತು ಗೊಂದಲಗಳು ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಧ್ಯಕ್ಷರು ಹಾಗೂ ಪೌರಾಯುಕ್ತರು ಅಧಿಕಾರಿಗಳ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಿದ್ದರೆ ನಗರಸಭೆ ಈ ಸ್ಥಿತಿಗೆ ಬರುತ್ತಿರಲಿಲ್ಲ ಎಂದರು.
ಸದಸ್ಯ ಅರುಣ್ ಶೆಟ್ಟಿ ಮಾತನಾಡಿ ಯಾವುದೇ ಕೆಲಸ ಹೇಳಿದರೂ ಪೌರಾಯುಕ್ತರು ನೌಕರರ ಕೊರತೆ ಇದೆ ಎಂದು ಕಾರಣ ನೀಡುತ್ತಿದ್ದಾರೆ, ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿಯಲು ಇವರೇ ಕಾರಣವೆಂದು ಆರೋಪಿಸಿದರು.
ಇಲ್ಲಿ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ವರ್ಗಾವಣೆ ಮಾಡಿಸಿಕೊಂಡು ಹೋಗಿ ಎಂದರು.
ಕೆ.ಎಂ.ಅಪ್ಪಣ್ಣ ಮಾತನಾಡಿ ಅಧಿಕಾರಿಗಳು ಜನಸ್ನೇಹಿಯಾಗಿ ವರ್ತಿಸುತ್ತಿಲ್ಲ, ಸಕಾಲದಡಿ 21 ಅರ್ಜಿಗಳನ್ನು ವಿಲೇವಾರಿ ಮಾಡಲು ಅವಕಾಶವಿದೆ. ಆದರೆ ಇಲ್ಲಿ ಕೇವಲ ನಾಲ್ಕು ವಿಷಯಗಳಿಗೆ ಸಂಬಂಧಿಸಿದ ಅರ್ಜಿಗಳು ಮಾತ್ರ ವಿಲೇವಾರಿಯಾಗುತ್ತಿದೆ. ಅಧಿಕಾರಿಗಳ ಕೊರತೆ ಎಂದು ನೆಪ ಹೇಳಲಾಗುತ್ತಿದೆ. ಮಡಿಕೇರಿ ನಗರದಲ್ಲಿರುವ ಜನಸಂಖ್ಯೆ ಕೇವಲ 34 ಸಾವಿರ, ನಗರಸಭೆಯಲ್ಲಿ ಪ್ರಸ್ತುತ ಇರುವ ಸಿಬ್ಬಂದಿಗಳ ಸಂಖ್ಯೆ 64. ಪ್ರತಿ ಐನೂರು ಮಂದಿಗೊಬ್ಬರು ಸಿಬ್ಬಂದಿ ಇದ್ದಾರೆ. ಇಷ್ಟು ಸಿಬ್ಬಂದಿಗಳಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಲು ಪೌರಾಯುಕ್ತರಿಂದ ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.
ಕಚೇರಿ ವೇಳೆಯಲ್ಲಿ ಪೌರಾಯುಕ್ತರು ಅಧಿಕಾರಿಗಳ ಸಭೆ ನಡೆಸುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಆರೋಗ್ಯ ಅಧಿಕಾರಿ ಹಾಗೂ ಕಂದಾಯ ಅಧಿಕಾರಿಗಳು ತಮ್ಮ ಕರ್ತವ್ಯದಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ನಗರಸಭೆಗೆ ಬರುವ ಸಾರ್ವಜನಿಕರು ಅರ್ಜಿಗಳು ವಿಲೇವಾರಿಯಾಗದೆ ಇದ್ದಾಗ ನಮ್ಮ ಸಹಾಯ ಕೋರುತ್ತಾರೆ. ಆದರೆ ಅಧಿಕಾರಿಗಳು ಅಸಹಕಾರ ತೋರುತ್ತಿರುವುದರಿಂದ ನಮ್ಮ ಮಾತಿಗೂ ಬೆಲೆ ಇಲ್ಲದಾಗಿದೆ. ಈ ಎಲ್ಲಾ ಬೆಳವಣಿಗೆಗಳಿಂದ ನಗರಸಭೆಗೆ ಬರಲು ನಮಗೆ ಮನಸ್ಸಿಲ್ಲದಾಗಿದೆ ಎಂದು ಅಪ್ಪಣ್ಣ ಬೇಸರ ವ್ಯಕ್ತಪಡಿಸಿದರು.
ಸದಸ್ಯ ಅಮಿನ್ ಮೊಹ್ಸಿನ್ ಮಾತನಾಡಿ ಅಧಿಕಾರಿಗಳು ದೂರವಾಣಿ ಮೂಲಕ ಸದಸ್ಯರಿಗೇ ಬ್ಲ್ಯಾಕ್ ಮೇಲ್ ಮಾಡುತ್ತಾರೆ, ಸಾರ್ವಜನಿಕರು ನಗರಸಭೆಯ ಸೇವೆಗಳಿಂದ ವಂಚಿತರಾಗುತ್ತಿದ್ದಾರೆ. ಪೌರಾಯುಕ್ತರು ಅಸಹಕಾರ ನೀಡುತ್ತಿದ್ದಾರೆ ಎಂದರೆ ಅವರನ್ನು ಬದಲಾಯಿಸಲು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.
ಆಡಳಿತ ನಡೆಸಲು ಚಲ ಬೇಕು, ಅಧ್ಯಕ್ಷರಿಗೆ ಅಧಿಕಾರ ವರವಾಗಿ ಬಂದಿದೆ. ಆದರೆ ಎರಡು ವರ್ಷ ಕಳೆದರೂ ಉತ್ತಮ ಆಡಳಿತ ನೀಡಲು ಸಾಧ್ಯವಾಗಿಲ್ಲ. ಆಡಳಿತ ಪಕ್ಷದ ಸದಸ್ಯರೇ ಅಸಹಾಯಕರಾಗಿದ್ದಾರೆ, ಸಮಸ್ಯೆಗಳು ಇದ್ದಾಗ ವಿಶೇಷ ಸಭೆ ಕರೆದು ಪರಿಹಾರಗಳನ್ನು ಕಂಡು ಕೊಳ್ಳಬೇಕಾಗಿತ್ತು. ವ್ಯವಸ್ಥೆಯನ್ನು ಸರಿ ಪಡಿಸಲು ನಾವೆಲ್ಲರೂ ಬೆಂಬಲ ಸೂಚಿಸಿದ್ದೆವು. ಆದರೆ ಸಭೆಗಳನ್ನೇ ನಡೆಸುತ್ತಿಲ್ಲ, ನಿಮ್ಮಿಂದ ಸಭೆ ನಡೆಸಲು ಸಾಧ್ಯವಾಗದಿದ್ದಲ್ಲಿ ನಾವು ಸಭೆ ಕರೆಯುತ್ತೇವೆ. ನಿಯಮದಲ್ಲಿ ಅದಕ್ಕೆ ಅವಕಾಶವಿದೆ ಎಂದು ಹೇಳಿದರು.
ಯಾರದ್ದೋ ಮಾತು ಕೇಳಿ ಅಧ್ಯಕ್ಷರು ಕತ್ತರಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ, ಅಧಿಕಾರಿಗಳಿಗೆ ಅಂಕುಶ ಹಾಕುವ ಕೆಲಸ ಅಧ್ಯಕ್ಷರಿಂದ ಆಗಬೇಕು ಎಂದರು.
ಮನ್ಸೂರ್ ಮಾತನಾಡಿ ಅಧಿಕಾರಿಗಳು ಕಚೇರಿಯಲ್ಲಿ ಇರುವುದೇ ಇಲ್ಲ, ಕುರ್ಚಿಗಳು ಖಾಲಿ ಇರುತ್ತವೆ, ಹೀಗಾದರೆ ಸಾರ್ವಜನಿಕರ ಪಾಡೇನು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸದಸ್ಯ ಬಿ.ವೈ.ರಾಜೇಶ್ ಮಾತನಾಡಿ ಕಳೆದ ಎರಡು ವರ್ಷಗಳಿಂದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಅನುಷ್ಠಾನಗೊಂಡಿಲ್ಲ. ಈ ಸಭೆಯಿಂದ ಕಾಲಹರಣವೇ ಹೊರತು ಯಾವುದೇ ಪ್ರಯೋಜನವಿಲ್ಲ. ಆಡಳಿತ ವ್ಯವಸ್ಥೆ ಅಧಿಕಾರಿಗಳ ಮೇಲೆ ಹಿಡಿತ ಕಳೆದುಕೊಂಡಿದೆ. ಕಳೆದ 25 ವರ್ಷಗಳಿಂದ ಈ ರೀತಿಯ ನಗರಸಭೆಯನ್ನು ನಾನು ನೋಡಿಲ್ಲ. ವ್ಯವಸ್ಥೆ ಸುಧಾರಿಸದಿದ್ದಲ್ಲಿ ಜನ ನಗರಸಭೆಗೆ ಕಲ್ಲು ಹೊಡೆಯುವ ದಿನ ದೂರವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸದಸ್ಯ ಕೆ.ಎಸ್.ರಮೇಶ್ ಮಾತನಾಡಿ ಸದಸ್ಯರುಗಳಿಗೆ ಗೌರವ ನೀಡದೆ ಉಡಾಫೆ ತೋರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ, ಇಲ್ಲದಿದ್ದಲ್ಲಿ ನಾನೇ ಕೋರ್ಟ್‍ಗೆ ಹೋಗಲು ಸಿದ್ಧ ಎಂದರು.
ಫಾರಂ ನಂ.3 ವಿಚಾರದಲ್ಲಿ ವಿನಾಕಾರಣ ತೊಂದರೆ ನೀಡಲಾಗುತ್ತಿದೆ. ಸಾರ್ವಜನಿಕರು ತೆರಿಗೆಯಾಗಿ ನೀಡುವ ಹಣವನ್ನು ಸಂಬಳದ ರೂಪದಲ್ಲಿ ಪಡೆಯುವ ಅಧಿಕಾರಿಗಳು ಸ್ವಲ್ಪವಾದರು ನಿಯತ್ತಿನಿಂದ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ತಪ್ಪಿದಲ್ಲಿ ನಗರಸಭೆಗೆ ಬಂದ ಜನರು ಹಾಕುವ ಶಾಪ ತಟ್ಟದೆ ಇರುವುದಿಲ್ಲ. ವ್ಯವಸ್ಥೆಯನ್ನು ಸರಿ ಪಡಿಸಲು ನಾವೆಲ್ಲರು ಅಧ್ಯಕ್ಷರೊಂದಿಗೆ ಇದ್ದೇವೆ ಎಂದು ಸ್ಪಷ್ಟಪಡಿಸಿದರು.
ಸದಸ್ಯ ಮಹೇಶ್ ಜೈನಿ ಮಾತನಾಡಿ ಸದಸ್ಯರು ಹಾಗೂ ಅಧಿಕಾರಿಗಳ ನಡುವೆ ಪೌರಾಯುಕ್ತರು ಕಂದಕ ನಿರ್ಮಿಸಿದ್ದಾರೆ, ಪೌರಾಯುಕ್ತರು ಹೇಳಿಕೊಟ್ಟಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದು, ಸದಸ್ಯರಿಗೆ ಗೌರವ ನೀಡುತ್ತಿಲ್ಲ. ಸಭಾಂಗಣದೊಳಗೆ ಪೌರಾಯುಕ್ತರು ಅಧಿಕಾರಿಗಳ ಸಭೆ ನಡೆಸುತ್ತಾರೆ, ಇವರು ಬರುವವರೆಗೆ ಸದಸ್ಯರಾದ ನಾವು ಹೊರಗೆ ಬೆಂಚ್ ನಲ್ಲಿ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ನಗರಸಭೆಯ ಆಡಳಿತ ವ್ಯವಸ್ಥೆ ಹಾಳಾಗಲು ಪೌರಾಯುಕ್ತರೇ ನೇರ ಹೊಣೆ ಎಂದು ಗಂಭೀರ ಆರೋಪ ಮಾಡಿದರು.
ಕಚೇರಿಗಳಲ್ಲಿ ಯಾವುದೇ ಕೆಲಸ ನಡೆಯದ ಮೇಲೆ ನಮಗೆ ನಗರಸಭೆ ಯಾಕೆ ಬೇಕು ಎಂದು ಪ್ರಶ್ನಿಸಿದರು.
::: ಮರಣದಂಡನೆ ನೀಡಿ :::
ಸದಸ್ಯರೆಲ್ಲರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ ನಂತರ ಮಾತನಾಡಿದ ಪೌರಾಯುಕ್ತ ವಿಜಯ ಅವರು, ನೀವುಗಳು ಹೇಳಿರುವುದನ್ನು ಒಪ್ಪುವೆ, ಆರಂಭದಲ್ಲಿ ಉತ್ಸಾಹದಿಂದ ಕೆಲಸ ಮಾಡಿದ್ದೇನೆ. ಆದರೆ ಇತ್ತೀಚೆಗೆ ಎಂಜಿನಿಯರ್ ಗಳು, ಲೆಕ್ಕಾಧಿಕಾರಿ ಸೇರಿದಂತೆ ಅಧಿಕಾರಿಗಳ ಕೊರತೆ ಹೆಚ್ಚಾಗಿದೆ. ಈಗ ನನ್ನ ಬಲ ಕುಗ್ಗಿದೆ, ಸದಸ್ಯರುಗಳಿಗೆ ಗೌರವ ನೀಡಬೇಡಿ ಎಂದು ನಾನು ಯಾವುದೇ ಅಧಿಕಾರಿಗಳಿಗೆ ಹೇಳಿಲ್ಲ. ಬೇಕಾದರೆ ನೀವುಗಳೇ ಅಧಿಕಾರಿಗಳನ್ನು ಖುದ್ದು ಕೇಳಿ ನೋಡಿ, ನಾನು ಸಭೆಯಿಂದ ಹೊರಗೆ ಇರುತ್ತೇವೆ. ನಾನು ಹೇಳಿದ್ದೇನೆ ಎಂದು ಸಾಬೀತಾದರೆ ಯಾವುದೇ ಶಿಕ್ಷೆ ಅನುಭವಿಸಲು ಸಿದ್ಧ. ಬೇಕಿದ್ದರೆ ಮರಣ ದಂಡನೆಯನ್ನೂ ನೀಡಿ ಎಂದರು.
ಪೌರಾಯುಕ್ತರ ಮಾತಿಗೆ ಸದಸ್ಯರುಗಳು ಆಕ್ಷೇಪ ವ್ಯಕ್ತಪಡಿಸಿದರು. ಉಪಾಧ್ಯಕ್ಷೆ ಸವಿತಾ ರಾಕೇಶ್ ಸಭೆಯಲ್ಲಿ ಉಪಸ್ಥಿತರಿದ್ದರು.









