ಮಡಿಕೇರಿ ಡಿ.21 : ಜಿಲ್ಲಾ ಕೇಂದ್ರ ಮಡಿಕೇರಿ ಜನತೆಯ ನಿದ್ದೆಗೆಡಿಸುತ್ತಿರುವ ‘ಬೀದಿ ನಾಯಿ’ಗಳ ಉಪಟಳ ಇದೀಗ ನಗರಸಭೆಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸುತ್ತಿರುವಂತೆಯೇ, ಕೆಲವು ಬಡಾವಣೆಗಳಲ್ಲಿನ ಮುಳ್ಳುಹಂದಿ, ಕಾಡು ಹಂದಿಗಳ ಉಪಟಳವೂ ಇದರೊಂದಿಗೆ ಸೇರಿಕೊಳ್ಳುವ ಮೂಲಕ ಒಟ್ಟು ಸಮಸ್ಯೆಯನ್ನು ಜಟಿಲಗೊಳಿಸಿದೆ.
ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ನಗರಸಭಾ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಕೆ.ಎಸ್.ರಮೇಶ್, ನಗರದ ಪ್ರತಿ ರಸ್ತೆ ರಸ್ತೆಯಲ್ಲು ಬೀದಿ ನಾಯಿಗಳ ಹಿಂಡು ಕಂಡು ಬರುತ್ತಿದ್ದು, ಸಾಕಷ್ಟು ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ದಷ್ಟ ಪುಷ್ಟವಾಗಿರುವ ಬೀದಿನಾಯಿಗಳ ಕಾಟಕ್ಕೆ ಕೊನೆ ಹಾಡಬೇಕಾಗಿದೆ ಎಂದರು.
ಬೀದಿನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿಸಿದರು ನಾಯಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಲೆ ಇದೆ ಎಂದು ಆತಂಕ ವ್ಯಕ್ತಪಡಿಸಿದ ರಮೇಶ್, ಪರಿಸ್ಥಿತಿ ಕೈ ಮೀರುವುದಕ್ಕೂ ಮೊದಲು ನಗರದಲ್ಲಿರುವ ಎಲ್ಲಾ ಬೀದಿ ನಾಯಿಗಳನ್ನು ಹಿಡಿಯಬೇಕು. ನಗರ ವ್ಯಾಪ್ತಿಯ ಯಾವುದಾದರು ಅರ್ಧ ಏಕರೆ ಪ್ರದೇಶದ ಸುತ್ತ ಬೇಲಿ ಅಳವಡಿಸಿ ಅಲ್ಲಿ ಈ ನಾಯಿಗಳನ್ನು ಬಿಡಬೇಕು. ಬೀದಿನಾಯಿಗಳ ನಿಯಂತ್ರಣಕ್ಕೆ ಸರ್ಕಾರ ಒದಗಿಸುವ ಹಣವನ್ನು ಇಲ್ಲಿ ಆಶ್ರಯ ಪಡೆಯುವ ನಾಯಿಗಳ ಆಹಾರಕ್ಕೆ ಒಳಸಬಹುದು ಎಂದು ಸಲಹೆ ನೀಡಿದರು.
ಸದಸ್ಯ ಅಮಿನ್ ಮೊಹಿಸಿನ್ ಮಾತನಾಡಿ, ಬೀದಿ ನಾಯಿಗಳು ಯಾವುದೇ ಸಾರ್ವಜನಿಕರಿಗೆ ಕಚ್ಚಿದಲ್ಲಿ ಅದರ ಹೊಣೆಗಾರಿಕೆ ಆಯಾ ನಗರಸಭೆಯದ್ದು ಎಂದು ನ್ಯಾಯಾಲಯ ಸೂಚಿಸಿದೆ. ಅಧ್ಯಕ್ಷರು ವಿಷಯದ ಗಂಭೀರತೆಯನ್ನು ಅರಿತು ಬೀದಿ ನಾಯಿಗಳನ್ನು ಹಿಡಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದರು.
::: ಹಂದಿಗಳ ಕಾಟ :::
ನಾಯಿಗಳ ಹಾವಳಿಯ ಚರ್ಚೆ ಗಂಭೀರತೆಯನ್ನು ಪಡೆಯುತ್ತಿದ್ದ ಹಂತದಲ್ಲೆ ನಗರಸಭಾ ಸದಸ್ಯ ಮನ್ಸೂರ್ ಆಲಿ ಮಾತನಾಡಿ ‘ಬೀದಿ ನಾಯಿಗಳ ಕಾಟ ಒಂದೆಡೆಯಾದರೆ, ವೈದ್ಯಕೀಯ ಕಾಲೇಜು ಬಳಿಯ ತನ್ನ ವಾರ್ಡ್‍ನಲ್ಲಿ ಮುಳ್ಳು ಹಂದಿ ಮತ್ತು ಕಾಡು ಹಂದಿಗಳ ಕಾಟ ತೀವ್ರಗೊಂಡಿದೆ. ಕಾಡು ಹಂದಿ ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿದ ಘಟನೆಯೂ ನಡೆದಿದೆ, ಮುಳ್ಳು ಹಂದಿಯ ಮುಳ್ಳಿನಿಂದ ಹಾನಿಯಾಗುವ ಅಪಾಯವಿದೆ ಎನ್ನುವ ಮೂಲಕ ಬೀದಿ ನಾಯಿಗಳ ಉಪಟಳದ ಸರದಿಗೆ ಮುಳ್ಳು ಹಂದಿಯನ್ನು ಸೇರಿಸಿದರು. ಈ ಎಲ್ಲಾ ಸಮಸ್ಯೆಗಳಿಗೆ ನಗರಸಭೆ ಪರಿಹಾರ ಕಂಡುಕೊಳ್ಳಲಿದೆಯೇ ಅಥವಾ ಹಿಂದಿನ ನಿರ್ಣಯಗಳಂತೆ ಇದು ಕೂಡ ನಿರ್ಣಯವಾಗಿಯೇ ಉಳಿಯಲಿದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.










