ಮಡಿಕೇರಿ ಡಿ.21 : ಏಳು ವರ್ಷದ ಬಾಲಕಿ ಮಾಯಾ ಅಪ್ಪಚ್ಚು ತನ್ನ ಶಾಲೆಯ ಆರಂಭದ ದಿನಗಳಲ್ಲಿ ಅಲ್ಲಿಯ ಹೊಸ ವಾತಾವರಣದಲ್ಲಿ ತನಗೆ ಉಂಟಾದ ಭಯ, ಆತಂಕ, ಮನಸ್ಸಿನ ಗೊಂದಲಗಳು ಹಾಗೂ ಅದ್ಭುತ ಕಲ್ಪನಾ ಶಕ್ತಿಯನ್ನು ಸ್ವತ: ತಾನೇ ವಿಶೇಷವಾಗಿ ವಿವರಿಸಿರುವ “ಮಾಯಾಳ ಮಾಂತ್ರಿಕ ಜಗತ್ತು” ಪುಸ್ತಕ ಇಂದು ಬಿಡುಗಡೆಗೊಂಡಿತು.
ಮಡಿಕೇರಿಯಲ್ಲಿ ಮಾಯಾ ಅಪ್ಪಚ್ಚು ಬರೆದಿರುವ “The girl who unleashed MAGIC” ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಾಯಾಳ ತಾಯಿ ಸಂಚಿತ್ ಅಪ್ಪಚ್ಚು, ತಂದೆ ಕಾರ್ತಿಕ್ ಅಪ್ಪಚ್ಚು, ಮಾಯಾಳ ನೆನಪುಗಳನ್ನು ಮೆಲುಕು ಹಾಕಿ, ಅವಳ ಬರಹಳನ್ನು ಪುಸ್ತಕ ರೂಪದಲ್ಲಿ ಸಂಗ್ರಹಿಸಿದ ಕೊಡವ ಮಕ್ಕಡ ಕೂಟದ ಸ್ಥಾಪಕ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಕೊಡವ ಮಕ್ಕಡ ಕೂಟದ ಸ್ಥಾಪಕ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಮಾಯಾಳ ಸಾಧನೆಯನ್ನು ಇತರ ವಿದ್ಯಾರ್ಥಿಗಳಿಗೆ ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ಕೊಡಗಿನ ಶಾಲಾ ಕಾಲೇಜುಗಳ ಗ್ರಂಥಾಲಯಗಳಿಗೆ ಪುಸ್ತಕವನ್ನು ನೀಡಲಾಗುವುದೆಂದರು.
ಮಾಯಾಳ ಪುಟ್ಟ ಸಹೋದರ ವರುಣ್ ಹಾಜರಿದ್ದರು.
ಅಮೇರಿಕದ ಹೈಕ್ರಾಫ್ಟ್ ಡ್ರೈವ್ ಎಲೆಮೆಂಟ್ರಿ ಸ್ಕೂಲ್ ನಲ್ಲಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಾಯಾ ಅಪ್ಪಚ್ಚು ಒಬ್ಬ ಅಪರೂಪದ ಪ್ರತಿಭಾವಂತ ಬಾಲಕಿ. ಪ್ರತೀ ಒಂದು ವಸ್ತು ಅಥವಾ ಜೀವಿಗೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ವಿವರವಾಗಿ ತಿಳಿದುಕೊಳ್ಳುವ ಕುತೂಹಲ. ಅವುಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವ ಹಸಿವು, ಉತ್ಸಾಹ. ಕೀಟಗಳ ಮೇಲೆ ಅವಳಿಗಿದ್ದ ಒಲವು ತಾನು ಕೀಟ ಶಾಸ್ತ್ರಜ್ಞೆ ಆಗಬೇಕು ಎಂಬ ಬಯಕೆಯನ್ನು ಅವಳಲ್ಲಿ ಮೂಡಿಸಿತ್ತು.
ವಿದ್ಯಾ ಬುದ್ಧಿಯ ಜೊತೆಗೆ ಶಾಸ್ತ್ರೀಯ ಸಂಗೀತ, ನಾಟ್ಯಶಾಸ್ತ್ರ, ಚಿತ್ರಕಲೆ, ಸಾಹಿತ್ಯ ರಚನೆ ಇವೆಲ್ಲವೂ ಆಕೆಗೆ ಒಲಿದಿತ್ತು. ಹಾಗಾಗಿ ತನ್ನ ಅಧ್ಯಾಪಕರ, ಸಹಪಾಠಿಗಳ, ನೆರೆಯ ಹೊರೆಯವರ ಮೆಚ್ಚುಗೆಗೆ ಪಾತ್ರವಾಗಿದ್ದ ಮಾಯಾ ಅಪ್ಪಚ್ಚು, ತನ್ನ ಜೀವಿತದ ಎಂಟು ವರ್ಷಗಳ ಅವಧಿಯಲ್ಲಿ ಸಾಧನೆಯ ಹಾದಿಯನ್ನು ಹಿಡಿದಿದ್ದಳು.
ನಕಾರಾತ್ಮಕ ಭಾವನೆಗಳನ್ನು ಜಯಿಸುವ ಗುಟ್ಟನ್ನು ತಿಳಿಯಲು ಅವಳು ಕೈಗೊಂಡ ರೋಮಾಂಚಕ ಪ್ರಯಾಣ, ಇತ್ಯಾದಿ ಶೌರ್ಯ ಸಾಹಸಗಳಿಂದ ಕೂಡಿದ ಮಾಂತ್ರಿಕ ಜಗತ್ತನ್ನು ಏಳನೇ ವಯಸ್ಸಿನಲ್ಲಿ “The girl who unleashed MAGIC” ಎಂಬ ಶೀರ್ಷಿಕೆಯ ಆಂಗ್ಲ ಭಾಷೆಯ ಕಥೆಯನ್ನು ತನ್ನ ಡೈರಿಯಲ್ಲಿ ಚಿತ್ರಗಳ ಸಹಿತ ಬರೆದು ಇಟ್ಟಿದ್ದಾಳೆ.
“The girl who unleashed MAGIC” ಆಂಗ್ಲ ಭಾಷೆಯ ಕೃತಿಯನ್ನು ಕೊಡವ ಮಕ್ಕಡ ಕೂಟದ 78ನೇ ಪುಸ್ತಕವಾಗಿ ಬಿಡುಗಡೆಗೊಂಡಿದೆ.
ಚಿತ್ರಕಲಾವಿದೆ, ರಂಗ ಕಲಾವಿದೆ, ಕವಯತ್ರಿ, ಗಾಯಕಿ, ಬರಹಗಾರ್ತಿ, ಪತ್ರಕರ್ತೆ ಹಾಗೂ ಸಂಗೀತ ನಿರ್ದೇಶಕಿ, ಕೊಡಗಿನ “ಶಕ್ತಿ” ದಿನಪತ್ರಿಕೆಯ “ಚೇತನ”ದ ಉಪ ಸಂಪಾದಕಿಯಾಗಿದ್ದ ಪುಷ್ಪ ದೇವಯ್ಯ ಕಂಬೆಯಂಡ ಅವರು ಕನ್ನಡ ಭಾಷೆಗೆ ಅನುವಾದ ಮಾಡಿರುವ “ಮಾಯಾಳ ಮಾಂತ್ರಿಕ ಜಗತ್ತು” 79ನೇ ಪುಸ್ತಕವಾಗಿ ಬಿಡುಗಡೆಗೊಂಡಿದೆ.
::: ದು:ಖಕರ :::
ಆದರೆ ಮಾಯಾ ಇಂದು ಜೀವಂತವಾಗಿಲ್ಲ ಎನ್ನುವ ವಿಚಾರ ಅತ್ಯಂತ ದು:ಖಕರವಾಗಿದೆ. ತನ್ನ ಎಂಟನೇ ವಯಸ್ಸಿಗೆ ಬಾರದ ಲೋಕಕ್ಕೆ ತೆರಳಿದ ಆಕೆ ಬಿಟ್ಟು ಹೋದ ನೆನಪುಗಳು ಅಪಾರ. ಆಕಾಸ್ಮಿಕವಾಗಿ AVM ನಿಂದ ಅಕಾಲಿಕ ಮರಣ ಹೊಂದಿದ ಮಾಯಾಳ ನೆನಪು ಮಾತ್ರ ಈಗ ಶಾಶ್ವತವಾಗಿದೆ. ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಾಯಾ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ.
ಪುತ್ರಿ ಮಾಯಾಳ ಅಂಗಾಂಗಗಳನ್ನು ದಾನ ಮಾಡಿದ ಕಾರಣಕ್ಕಾಗಿ “ಹಾನರ್ ಬ್ರಿಡ್ಜ್” ಸಂಸ್ಥೆ ಪೋಷಕರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಮಾಯಾ ನೆನಪಿನಲ್ಲಿ ಅಮೇರಿಕ ಹೈಕ್ರಾಫ್ಟ್ ಡ್ರೈವ್ ಎಲೆಮೆಂಟ್ರಿ ಸ್ಕೂಲ್ ನಲ್ಲಿ ಚೆರ್ರಿ ಗಿಡ ನೆಡುವ ಮೂಲಕ ಸಂತಾಪ ಸೂಚಿಸಿದೆ. ಕಣ್ಣು ದಾನ ಮಾಡಿದಕ್ಕಾಗಿ “ಮಿರಾಕಲ್ ಇನ್ ಸೈಟ್ ಸಂಸ್ಥೆ” ತನ್ನ ಲಾಂಚನವನ್ನು ಪೋಷಕರಿಗೆ ನೀಡಿದೆ.
ಮಾಯಾಳ ತಾಯಿ ಸಂಚಿತ್ ಅಪ್ಪಚ್ಚು, ತಂದೆ ಕಾರ್ತಿಕ್ ಅಪ್ಪಚ್ಚು ಪುಟ್ಟಿಚಂಡ ಮೂಲತಃ ಕೊಡಗು ಜಿಲ್ಲೆಯರಾಗಿದ್ದು, ಉದ್ಯೋಗದ ನಿಮಿತ್ತ ವಿದೇಶದಲ್ಲಿ ನೆಲೆಸಿದ್ದಾರೆ. ಮೀರ (ಅಮ್ಮ) ಹಾಗೂ ವಿಠಲ್ (ತಾತ), ಅಯ್ಯಪ್ಪ (ಮಾಮಾ) ಕೊಡಾಂಗಡ ಹಾಗೂ ಪುಟ್ಟಿಚಂಡ ಅಪ್ಪಯ್ಯ ಮತ್ತು ಜಾನ್ಸಿ ಮೂಲತಃ ಕೊಡಗಿನವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದು, ಮಾಯಾಳ ಮಾಂತ್ರಿಕ ಜಗತ್ತು ಪುಸ್ತಕವನ್ನು ಬಿಡುಗಡೆಗೊಳಿಸುವ ಮೂಲಕ ಮಾಯಾಳ ಕನಸ್ಸನ್ನು ನನಸು ಮಾಡಿದ್ದಾರೆ.













