ಸೋಮವಾರಪೇಟೆ ಡಿ.23 : ಧರ್ಮಸ್ಥಳ -ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪ ಎರಡು ಕಾರುಗಳ ನಡುವೆ ನಡೆದ ಅಪಘಾತದಲ್ಲಿ ಪಟ್ಟಣದ ವರ್ತಕರೋರ್ವರು ಮೃತಪಟ್ಟಿದ್ದು, ಉಳಿದ ಎಂಟು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಪಟ್ಟಣದ ಆಲೇಕಟ್ಟೆ ರಸ್ತೆಯ ನಿವಾಸಿ ಕೆಂಚುಮನೆ ರವಿ(53) ಮೃತ ದುರ್ದೈವಿ.
ರಾಜು ಹಾಗೂ ಕುಟುಂಬ ಧರ್ಮಸ್ಥಳದಲ್ಲಿ ಪೂಜೆ ಮುಗಿಸಿಕೊಂಡು ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಸಂದರ್ಭ ಮರ್ಧಾಳ ಸಮೀಪ ಅಳೇರಿ ತಿರುವಿನಲ್ಲಿ ಎದುರಿನಿಂದ ಬಂದ ಕಾರು ಮುಖಾಮುಖಿ ಡಿಕ್ಕಿಯಾಗಿದೆ. ಓಮಿನಿ ಚಲಾಯಿಸುತ್ತಿದ್ದ ರವಿ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ.
ರವಿ ಅವರ ತಾಯಿ ಮಣಿಯಮ್ಮ, ಪತ್ನಿ ವಾಣಿ, ಪುತ್ರಿ ರಿಷಾ, ಪುತ್ರ ಶರಣ್, ಸಹೋದರ ಯೋಗೇಶ್, ಅವರ ಪತ್ನಿ ನೀತು, ಪುತ್ರಿ ನೇಹಾ, ಪುತ್ರ ಅಂಜನ್ ಗಾಯಗೊಂಡಿದ್ದು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಕಡಬ ಪೋಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಾಗಿಸಿಕೊಂಡಿದ್ದಾರೆ.
ತಿರುವಿನಲ್ಲಿ ರಸ್ತೆ ಕಿರಿದಾಗಿದ್ದು, ರಸ್ತೆಗೆ ತಾಗಿದಂತೆ ಇರುವ ವಿದ್ಯುತ್ ಕಂಬದಿಂದಾಗಿ ಹಲವು ಅಪಘಾತಗಳು ಸಂಭವಿಸುತ್ತಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.







