ಸುಂಟಿಕೊಪ್ಪ ಡಿ.23 : ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣವು ವಿದ್ಯಾರ್ಥಿಗಳ ಜೀವನದ ಮಹತ್ತರ ದಿಕ್ಸೂಚಿಯಾಗಿದ್ದು, ಪರಿಶ್ರಮಪಟ್ಟರೆ ಶೈಕ್ಷಣಿಕ ಗುರಿ ಸಾಧಿಸಬಹುದು ಎಂದು ಕೊಡಗು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ.ಲೋಕೇಶ್‌ಕುಮಾರ್ ಕಿವಿಮಾತು ಹೇಳಿದರು.
ಕೊಡಗರಹಳ್ಳಿಯ ಸುಂಟಿಕೊಪ್ಪ ನಾಡು ಪ್ರೌಢಶಾಲೆಯಲ್ಲಿ 59ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಸುಂಟಿಕೊಪ್ಪ ನಾಡು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ, ಅಲ್ಲದೆ ಉನ್ನತ ಸ್ಥಾನಮಾನಗಳಿಗೆ ಹೋಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವೆಂದರು.
ವಿದ್ಯಾರ್ಥಿಗಳ ಉಜ್ವಲ ಬಾಳನ್ನು ಬೆಳಗಿದ ಕೀರ್ತಿ ಶಿಕ್ಷಕರಿಗೆ ಸಲ್ಲುತ್ತದೆ. ಶಿಕ್ಷಣ ಇಲ್ಲದೆ ಬದಕಲು ಸಾಧ್ಯವಿಲ್ಲ, ಸಮಾಜದಲ್ಲಿ ಗೌರವದ ಸ್ಥಾನಮಾನ ಸಿಗಬೇಕಾದರೆ ಶಿಕ್ಷಣ ಮುಖ್ಯ. ವಿದ್ಯಾರ್ಥಿಗಳು ಪ್ರೌಢ, ಪದವಿ ಪೂರ್ವ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪ್ಪಳ್ಳಿ ರವೀಂದ್ರ ವಿದ್ಯಾರ್ಥಿಗಳು ಶೈಕ್ಷಣಿಕ ಹಾದಿಯಲ್ಲಿ ಹೆಚ್ಚಿನ ಪರಿಶ್ರಮ ಪಟ್ಟರೆ ಮಾತ್ರ ಮುಂದಿನ ಜೀವನ ಸುಖಕರವಾಗಿರಲಿದೆ. ಉತ್ತಮ ಗುಣ ನಡತೆಯನ್ನು ಮೈಗೂಡಿಸಿಕೊಂಡರೆ ಮಾತ್ರ ಭವಿಷ್ಯದ ದಿನಗಳಲ್ಲಿ ಉನ್ನತ ಹುದ್ದೆಗಳಾದ ಐಎಎಸ್, ಐಪಿಎಸ್ ಮತ್ತು ಕೆಎಎಸ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸ್ಥಾನ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
7ನೇ ಹೊಸಕೋಟೆ ದೀಪ್ತಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಜಿಜಿ ಎನ್.ಈ., ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಚೆಟ್ಟೀರ ನಿರತ ಬೆಳ್ಳಿಯಪ್ಪ, ಸುಂಟಿಕೊಪ್ಪ ಗ್ರಾ.ಪಂ.ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಹಾಗೂ ನಿವೃತ್ತ ಮುಖ್ಯ ಶಿಕ್ಷಕಿ ಕೆ.ಎಸ್.ಸಾವಿತ್ರಿ ಅವರುಗಳು ಮಾತನಾಡಿದರು.
ಶಾಲಾ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್ ಅವರು ವಹಿಸಿದ್ದರು.
ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಭಾಜನರಾಗಿರುವ ಸಿಸ್ಟರ್ ಜಿಜಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಾರ್ಷಿಕ ವರದಿಯನ್ನು ಶಾಲೆಯ ಮುಖ್ಯ ಶಿಕ್ಷಕಿ ಕೆ.ಎಸ್.ಇಂದಿರಾ ವಾಚಿಸಿದರು.
ಸಮಾರಂಭದಲ್ಲಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶಬ್ಬೀರ್, ಆಲಿಕುಟ್ಟಿ, ಹರಪ್ಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಕುಶಾಲನಗರ ಸಂಚಾಲಕ ಖಾಸಿಂ, ಗುಡ್ಡೆಹೊಸೂರು ಉದ್ಯಮಿ ಗಗನ್ ಕೊಡಗರಹಳ್ಳಿ ಮಾಜಿ ಸದಸ್ಯ ಉಸ್ಮಾನ್, ಕಂಬಿಬಾಣೆ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನಯನ, ಪೋಷಕರು, ಮತ್ತಿತರರು ಉಪಸ್ಥಿತರಿದ್ದರು.
ಕೆ.ಎಸ್.ಇಂದಿರಾ ಸ್ವಾಗತಿಸಿ, ಸಹಶಿಕ್ಷಕ ಗುರುಕ್ಕಿ ನಿರೂಪಿಸಿ, ಶೋಭಾ ಎಂ.ಟಿ. ವಂದಿಸಿದರು. ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.










