ಮಡಿಕೇರಿ ಡಿ.24 : ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾ ಘಟಕದ ನಿಯೋಗ ಇಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಭೇಟಿಯಾಗಿ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಿತು.
ವಿರಾಜಪೇಟೆಯ ಶಾಸಕರ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಕೆ.ಪಿ.ಸೋಮಣ್ಣ ಹಾಗೂ ಉಪಾಧ್ಯಕ್ಷ ಸುಧೀರ್ ಎಸ್. ಅವರ ನೇತೃತ್ವದಲ್ಲಿ ಭೇಟಿಯಾದ ಪದಾಧಿಕಾರಿಗಳು, ಕಳೆದ ಅನೇಕ ವರ್ಷಗಳಿಂದ ಮಾಜಿ ಸೈನಿಕರು ಅನುಭವಿಸಿಕೊಂಡು ಬರುತ್ತಿರುವ ಕಷ್ಟ ನಷ್ಟಗಳ ಬಗ್ಗೆ ವಿವರಿಸಿದರು. ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿರುವ ಕುರಿತು ಗಮನ ಸೆಳೆದ ಪ್ರಮುಖರು, ದೇಶಕ್ಕಾಗಿ ಹಗಲಿರುಳು ದುಡಿದ ನಮ್ಮ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ನೀಡುವಂತೆ ಮನವಿ ಮಾಡಿದರು.
::: ಬೇಡಿಕೆಗಳು :::
ಅತಿ ಹೆಚ್ಚು ಮಾಜಿ ಸೈನಿಕರನ್ನು ಹೊಂದಿರುವ ಖ್ಯಾತಿಯ ಕೊಡಗು ಜಿಲ್ಲೆಗೆ ಒಂದು ಸೈನಿಕ ಭವನದ ಅವಶ್ಯಕತೆ ಇದೆ. ಆದ್ದರಿಂದ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಮಾಜಿ ಸೈನಿಕರಿಗೆ ಪೈಸಾರಿ ಜಾಗ ಮಂಜೂರು ಆಗದೆ ಇರುವುದರಿಂದ ಅಕ್ರಮ ಸಕ್ರಮದಡಿಯಲ್ಲಿ ಮಂಜೂರು ಮಾಡಿಕೊಡಬೇಕು. ಅಲ್ಲದೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕಕ್ಕೆ ಕೂಡ ಜಾಗ ಮಂಜೂರು ಮಾಡಬೇಕೆಂದು ನಿಯೋಗ ಮನವಿ ಮಾಡಿತು.

ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ ಶಾಸಕ ಪೊನ್ನಣ್ಣ ಅವರು ಬೇಡಿಕೆಗಳನ್ನು ಶೀಘ್ರ ಈಡೇರಿಸುವ ಭರವಸೆ ನೀಡಿದರು. ಸ್ಥಳದಲ್ಲಿದ್ದ ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರೊಂದಿಗೆ ಈ ಕುರಿತು ಚರ್ಚಿಸಿ ಕ್ರಮಕ್ಕೆ ಸೂಚನೆ ನೀಡಿದರು.
ಸಂಘದ ಸಂಘಟನಾ ಕಾರ್ಯದರ್ಶಿ ಕುಟ್ಟಂಡ ಲವ, ಕಾರ್ಯದರ್ಶಿಗಳಾದ ಸಿ.ಜಿ.ತಿಮ್ಮಯ್ಯ, ಅರುಣ್, ಜಿಲ್ಲಾ ಮಹಿಳಾ ಸಂಚಾಲಕಿ ಎಂ.ಪಿ.ಭವಾನಿ, ಸಂಚಾಲಕರಾದ ರತನ್, ವಾಸು ಹಾಗೂ ಸದಸ್ಯರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.










