ಮಡಿಕೇರಿ, ಡಿ.26 : ಗೋಣಿಕೊಪ್ಪ ಕಾಪ್ಸ್ ಶಾಲೆಯಲ್ಲಿ ಕಾಶ್ಮೀರಿ ಯುವ ವಿನಿಮಯ’ ಕಾರ್ಯಕ್ರಮದ ಅಂಗವಾಗಿ ಜಮ್ಮು-ಕಾಶ್ಮೀರದ ಪುಲ್ವಾಮ, ಬದಗಾಂ, ಬಾರಮುಲ್ಲ, ಕುಪ್ಪಾರ, ಅನಂತ್‍ನಾಗ್, ಶ್ರೀನಗರ ಜಿಲ್ಲೆಗಳ ಯುವಕ, ಯುವತಿಯರು ಕೊಡಗಿಗೆ ಆಗಮಿಸಿದ್ದಾರೆ.
ಭಾರತ ಸರ್ಕಾರ ಗೃಹ ಮಂತ್ರಾಲಯ, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಸಂಘಟನೆ, ಜಿಲ್ಲಾ ಯುವ ಒಕ್ಕೂಟ, ಕೂರ್ಗ್ ಪಬ್ಲಿಕ್ ಶಾಲೆ ಮತ್ತು ಪ್ರೀ ಯೂನಿವರ್ಸಿಟಿ ಕಾಲೇಜು ಸಹಯೋಗದಲ್ಲಿ ಇಂದು ಸಂಜೆ (ಡಿ.26) ಗೋಣಿಕೊಪ್ಪ ಕಾಪ್ಸ್ ಶಾಲೆಯಲ್ಲಿ ಕಾಶ್ಮೀರಿ ಯುವ ವಿನಿಮಯ ‘ಕಾರ್ಯಕ್ರಮ ನಡೆಯಲಿದೆ.

ಇಲ್ಲಿಯ ಆಚಾರ-ವಿಚಾರ, ಕಲೆ, ಸಂಸ್ಕೃತಿ, ಉಡುಗೆ- ತೊಡುಗೆ, ಆಹಾರ ಪದ್ಧತಿ, ಜೀವನ ಶೈಲಿ, ಸರಕಾರದ ಯೋಜನೆಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಡುವ ಉದ್ದೇಶ ಇದೆ ಎಂದು ನೆಹರು ಯುವ ಕೇಂದ್ರ ದಕ್ಷಿಣ ಭಾರತ ವಲಯ ನಿರ್ದೇಶಕ ಎಂ.ಎನ್.ನಟರಾಜ್ ತಿಳಿಸಿದ್ದಾರೆ.
ಇಂದಿನಿಂದ ಡಿ.31ರ ವರೆಗೆ ನಡೆಯಲಿರುವ ಕಾರ್ಯಕ್ರಮವನ್ನು ಇಂದು ಸಂಜೆ 5 ಗಂಟೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ ಉದ್ಘಾಟಿಸಲಿದ್ದಾರೆ.
ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು, ಸಂಸದ ಪ್ರತಾಪ್ ಸಿಂಹ, ಎಂಎಲ್‍ಸಿ ಸುಜಾ ಕುಶಾಲಪ್ಪ, ಮಡಿಕೇರಿ ಶಾಸಕ ಡಾ. ಮಂಥರ್ ಗೌಡ, ಎಂಎಲ್‍ಸಿ ಬೋಜೇಗೌಡ, ಯುವ ಸಬಲೀಕರಣ, ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಕೂರ್ಗ್ ಅಕಾಡೆಮಿ ಫರ್ ಎಜುಕೇಷನ್ ಆಂಡ್ ಕಲ್ಪರ್ ಅಧ್ಯಕ್ಷ ಎಂ.ಡಿ. ನಂಜುಂಡ ಪಾಲ್ಗೊಳ್ಳಲಿದ್ದಾರೆ.
ಡಿ.31 ರಂದು ನಡೆಯುವ ಸಮಾರೋಪದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಲ್ಲೋಟ್, ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.









