ಕಡಂಗ ಡಿ.28 : ಸಮಸ್ತ ಕೇಂದ್ರೀಯ ಸುನ್ನಿ ವಿದ್ಯಾರ್ಥಿಗಳ ಒಕ್ಕೂಟ (ಎಸ್ಕೆಎಸ್ಎಸ್) ಎಡಪಾಲ ಶಾಖೆಯ ವಾರ್ಷಿಕ ಮಹಾಸಭೆಯು ಶಾಖೆಯ ಅಧ್ಯಕ್ಷರಾದ ಶಮೀಮುದ್ದೀನ್ ಅಧ್ಯಕ್ಷತೆಯಲ್ಲಿ ನಡೆಯಿತು.
ಒಕ್ಕೂಟದ ಪ್ರಮುಖರಾದ ಸಲೀಂ ಅವರ ನಿವಾಸದಲ್ಲಿ ನಡೆದ ಸಭೆಯನ್ನು ಜಿಲ್ಲಾ ಸಮಿತಿ ಪ್ರತಿನಿಧಿ ಹನೀಫ್ ಫೈಝಿ ಉದ್ಘಾಟಿಸಿದರು.
ನರಿಯಂದಡ ಗ್ರಾ.ಪಂ ಸದಸ್ಯ ಮುಹಮ್ಮದ್ ಮಾತನಾಡಿ, ಸಂಘಟನೆಯ ಪ್ರಾರಂಭಕಾಲದ ಬೆಳವಣಿಗೆಗಳ ಕುರಿತು ಮೆಲುಕು ಹಾಕಿದರು.
ಎಸ್ಕೆಎಸ್ಎಸ್ ಕರ್ನಾಟಕ ರಾಜ್ಯ ಸಮಿತಿ ಮೀಡಿಯಾ ವಿಂಗ್ ಕನ್ವೀನರಾದ ಶಬೀರ್ ಫೈಝಿ ಅಲ್ ಮಅಬರೀ “ಯುವಕರು ಹೆಚ್ಚಾಗಿ ಸಂಘಟನಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಮೂಲಕ ಸಾಮಾಜಿಕ ಪ್ರಜ್ಞೆಯುಳ್ಳ ಉತ್ತಮ ನಾಗರಿಕರಾಗಬಹುದು ಮತ್ತು ಸಮಾಜದಲ್ಲಿ ವ್ಯಾಪಕವಾಗುತ್ತಿರುವ ಮಾದಕ ವ್ಯಸನಗಳಂತಹ ದುಷ್ಚಟಗಳಿಂದ ತಮ್ಮ ಮಕ್ಕಳನ್ನು ದೂರವಿರಿಸಲು ಸಮುದಾಯ ಮತ್ತು ಸಮಾಜದ ಸಬಲೀಕರಣಕ್ಕಾಗಿ ಕಾರ್ಯಚರಿಸುತ್ತಿರುವ ಸಂಘಟನೆಗಳನ್ನು ಸಕ್ರೀಯಗೊಳಿಸಿ ಎಂದರು.
ಕಾರ್ಯಕ್ರಮದಲ್ಲಿ ಊರಿನ ಹಿರಿಯ ನಾಯಕರು ಮತ್ತು ಸುನ್ನಿ ಯುವಜನ ಸಂಘದ ಸದಸ್ಯರುಗಳಾದ ಹಂಝ ಕುಪ್ಪೋಡಂಡ, ಸಲೀಂ ಬೆಂಗಳೂರು, ಶಾಖಾ ಸಮಿತಿ ಉಪಾಧ್ಯಕ್ಷರಾದ ಶಂಸುದ್ದೀನ್, ಕಾರ್ಯಕಾರಿ ಕಾರ್ಯದರ್ಶಿ ಜಲೀಲ್ ಮತ್ತು ಸಮಿತಿ ಸದಸ್ಯರಾದ ಶರಫುದ್ದೀನ್, ಉಪಸಮಿತಿಗಳಾದ ಕ್ಯಾಂಪಸ್ ವಿಂಗ್, ವಿಖಾಯ, ಸಹಚಾರಿ ಪದಾಧಿಕಾರಿಗಳು ಹಾಜರಿದ್ದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾರಿಸ್ ಬಾಖವಿ ಸ್ವಾಗತಿಸಿದರು.