ಮಡಿಕೇರಿ ಡಿ.30 : ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಪತ್ರಿಕೆ ವಿತರಿಸುವ ಕಾರ್ಮಿಕರು ಅರೆಕಾಲಿಕ ವೃತ್ತಿ ನಿರ್ವಹಿಸುತ್ತಿದ್ದು, ಪ್ರತಿನಿತ್ಯ ಸಾರ್ವಜನಿಕರ ಮನೆ ಬಾಗಿಲಿಗೆ ಪತ್ರಿಕೆಗಳನ್ನು ವಿತರಿಸುತ್ತಾರೆ. ಈ ಕಾರ್ಮಿಕರಲ್ಲಿ ಬಹುತೇಕರು ದಿನಪತ್ರಿಕೆ ವಿತರಿಸಲು ದ್ವಿಚಕ್ರ ವಾಹನಗಳನ್ನು ಬಳಸುತ್ತಿದ್ದು, ಅಪಘಾತಕ್ಕೊಳಗಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ, ಈ ಕಾರ್ಮಿಕರಿಗೆ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ವಿತರಿಸುವ ಮೂಲಕ ಸಾಮಾಜಿಕ ಭದ್ರತೆ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ.
ಸೌಲಭ್ಯಗಳು: ಅಪಘಾತದಿಂದ ಮರಣ ಹೊಂದಿದಲ್ಲಿ ವಿಮಾ ಪರಿಹಾರ ರೂ. 2 ಲಕ್ಷ ಹಾಗೂ ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಲ್ಲಿ ರೂ. 2 ಲಕ್ಷಗಳವರೆಗೆ (ಶೇಕಡಾವಾರು ದುರ್ಬಲತೆ ಆಧಾರದ ಮೇಲೆ). ಅಪಘಾತ ಅಥವಾ ಮಾರಣಾಂತಿಕ ಕಾಯಿಲೆ ಅಥವಾ ಗಂಭೀರ ಅನಾರೋಗ್ಯಕ್ಕೆ ತುತ್ತಾದಲ್ಲಿ ಆಸ್ಪತ್ರೆ ವೆಚ್ಚ ಮರುಪಾವತಿ ರೂ. 1 ಲಕ್ಷಗಳವರೆಗೆ ದೊರೆಯುತ್ತದೆ.
ಈ ಯೋಜನೆಯ ಸೌಲಭ್ಯ ಪಡೆಯಲು 16 ರಿಂದ 59 ವಯೋಮಾನದವರಾಗಿದ್ದು, ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು, ಆದಾಯ ತೆರಿಗೆ ಪಾವತಿದಾರರಾಗಿರಬಾರದು ಹಾಗೂ ಭವಿಷ್ಯನಿಧಿ ಮತ್ತು ಇ.ಎಸ್.ಐ ಫಲಾನುಭವಿಯಾಗಿರಬಾರದು. ಅಲ್ಲದೇ, ಕೇಂದ್ರ ಸರ್ಕಾರದ ಇ-ಶ್ರಮ ಪೋರ್ಟಲ್ನಲ್ಲಿ “ನ್ಯೂಸ್ ಪೇಪರ್ ಬಾಯ್ (News Paper Boy) ಎಂಬ ವರ್ಗದಡಿ ನೋಂದಣಿಯಾಗಿರಬೇಕು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ, ಕೊಠಡಿ ಸಂಖ್ಯೆ 11, ಜಿಲ್ಲಾಡಳಿತ ಭವನ, ಮಡಿಕೇರಿ, ದೂರವಾಣಿ ಸಂಖ್ಯೆ. 08272-201534. ಹಾಗೆಯೇ, ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿ ಮಡಿಕೇರಿ, ಸೋಮವಾರಪೇಟೆ, ಹಾಗೂ ವಿರಾಜಪೇಟೆ ವೃತ್ತ ಇಲ್ಲಿಯೂ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಕೊಡಗು ಉಪ ವಿಭಾಗದ ಕಾರ್ಮಿಕ ಅಧಿಕಾರಿ ಎಸ್.ಎಲ್.ಹರ್ಷವರ್ಧನ್ ತಿಳಿಸಿದ್ದಾರೆ.