ಮಡಿಕೇರಿ, NEWS DESK ಅ. 31: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಸಂಸ್ಮರಣಾ ದಿನಾಚರಣೆಯನ್ನು ಶನಿವಾರ ನಗರದ ಪ್ರತಿಮೆ ಬಳಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ, ನಗರಸಭೆ ಅಧ್ಯಕ್ಷೆ ಪಿ. ಕಲಾವತಿ ಸೇರಿದಂತೆ ಹಲವು ಗಣ್ಯರು ಅಪ್ಪಯ್ಯ ಗೌಡರ ಪ್ರತಿಮೆಗೆ ಪುಷ್ಪಗುಚ್ಛ ಅರ್ಪಿಸಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ಡಾ. ಮಂತರ್ ಗೌಡ, ಗುಡ್ಡೆಮನೆ ಅಪ್ಪಯ್ಯ ಗೌಡರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಮಹಾನ್ ಹೋರಾಟಗಾರರಾಗಿದ್ದಾರೆ. ಅವರ ತ್ಯಾಗ ಮತ್ತು ಸಾಧನೆಯನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ ವರ್ಷವಿಡೀ ಸ್ಮರಿಸುವ ಕಾರ್ಯವಾಗಬೇಕು ಎಂದರು.
ಅಪ್ಪಯ್ಯ ಗೌಡರ ಸ್ಮರಣಾರ್ಥ ನಡೆಯುತ್ತಿರುವ ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ವಿವಿಧ ಸಂಘಟನೆಗಳು ಕೈಜೋಡಿಸುತ್ತಿರುವುದು ಶ್ಲಾಘನೀಯ. ಈಗಾಗಲೇ ಅಭಿವೃದ್ಧಿ ಕಾಮಗಾರಿಗಳಿಗೆ ಸಹಕಾರ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ 10 ಲಕ್ಷ ರೂ. ಅನುದಾನ ಒದಗಿಸುವ ಮೂಲಕ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಹಕರಿಸಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಅಪ್ಪಯ್ಯ ಗೌಡರ ಹೋರಾಟ ಮತ್ತು ಕೊಡುಗೆಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವ ನಿಟ್ಟಿನಲ್ಲಿ ಅರೆಭಾಷೆ ಅಕಾಡೆಮಿ ಪ್ರತಿವರ್ಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಮೆಚ್ಚುವಂತಹದ್ದು. ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಅಪ್ಪಯ್ಯ ಗೌಡರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಅಪ್ಪಯ್ಯ ಗೌಡರು ಕೇವಲ ಒಂದು ಸಮುದಾಯದ ನಾಯಕರಾಗಿರಲಿಲ್ಲ. ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀಮಂತ ಹೋರಾಟಗಾರರಾಗಿದ್ದರು. ಅವರ ಜೀವನ, ಹೋರಾಟ ಮತ್ತು ತ್ಯಾಗ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಕೆ.ಸಿ. ದಯಾನಂದ ಮಾತನಾಡಿ, ವೀರ ಪುರುಷರನ್ನು ಸ್ಮರಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಸಿಪಾಯಿ ದಂಗೆಗೂ ಮೊದಲೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರಲ್ಲಿ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರು ಪ್ರಮುಖರಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಅಪ್ಪಯ್ಯ ಗೌಡರ ಹೆಸರನ್ನು ಕೇವಲ ರಸ್ತೆಗಳಿಗೆ ಮಾತ್ರವಲ್ಲದೆ ಶಿಕ್ಷಣ ಸಂಸ್ಥೆಗಳಿಗೂ ನಾಮಕರಣ ಮಾಡಬೇಕು. ಜಿಲ್ಲೆಯ ಮಿಲಿಟರಿ ಶಾಲೆಗೆ ಅವರ ಹೆಸರಿಡಬೇಕು ಹಾಗೂ ಕೊಡಗು ವಿಶ್ವವಿದ್ಯಾಲಯದಲ್ಲಿ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.
ಮಂಗಳೂರಿನ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಹಾಗೂ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನಾ ಸಮಿತಿ ಅಧ್ಯಕ್ಷ ಕಿರಣ್ ಬುಡೆಲ್ಲುಗುತ್ತು ಮಾತನಾಡಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರರ ಕುರಿತು ಇಂದಿನ ಯುವಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಅಪ್ಪಯ್ಯ ಗೌಡರನ್ನು ಕೇವಲ ಸಮುದಾಯದ ವ್ಯಕ್ತಿಯಾಗಿ ಗುರುತಿಸದೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವೀರರಾಗಿ ಗೌರವಿಸಬೇಕು ಎಂದರು.
ಮಡಿಕೇರಿ ಬಸ್ ನಿಲ್ದಾಣಕ್ಕೆ ಗುಡ್ಡೆಮನೆ ಅಪ್ಪಯ್ಯ ಗೌಡರ ಹೆಸರನ್ನು ನಾಮಕರಣ ಮಾಡುವಂತೆ ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಜಿ. ಮೋಹನ್ ದಾಸ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ. ರಾಜೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ, ಹೆಚ್ಚುವರಿ ಜಿಲ್ಲಾಧಿಕಾರಿ ಜಯಲಕ್ಷ್ಮಿ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಪುಷ್ಪಾರ್ಚನೆ ಕಾರ್ಯಕ್ರಮದ ಅಂಗವಾಗಿ ರೇವತಿ ರಮೇಶ್ ಮತ್ತು ತಂಡದವರು ಅಪ್ಪಯ್ಯ ಗೌಡರ ಕುರಿತ ನಮನ ಗೀತೆ ಹಾಡಿದರು. ಪರ್ಲಕೋಟಿ ಸೋನಾ ಪ್ರೀತು ಮತ್ತು ತಂಡದವರು ನಮನ ಗೀತೆ ಪ್ರಸ್ತುತಪಡಿಸಿದರು. ಕುಶಾಲನಗರ ಹಾಗೂ ಮಕ್ಕಂದೂರು ಮಹಿಳಾ ಒಕ್ಕೂಟದವರು ಹಾಡುಗಳನ್ನು ಹಾಡಿದರು. ಚೋಕಾಡಿ ಪ್ರೇಮ ರಾಘವಯ್ಯ ತಂಡದವರು ಅಪ್ಪಯ್ಯ ಗೌಡರ ಜೀವನ ಚರಿತ್ರೆ ಕುರಿತ ಲಾವಣಿ ಗೀತೆ ಹಾಡಿದರು.
ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದವರು ಆಶಯ ಗೀತೆ ಹಾಡಿದರು. ಅಕಾಡೆಮಿ ಸದಸ್ಯ ವಿನೋದ್ ಮೂಡಗದ್ದೆ ನಿರೂಪಿಸಿ ಸ್ವಾಗತಿಸಿದರು. ಮೋಹನ್ ಪೊನ್ನಚ್ಚನ್ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಗೌಡ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

















