ಮಡಿಕೇರಿ ಡಿ.30 : ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಪೂರೈಸುವುದು, ಜಾನುವಾರುಗಳಿಗೆ ಮೇವು ಸರಬರಾಜು ಮಾಡುವುದು, ಸಂಬಂಧಪಟ್ಟ ಇಲಾಖೆಗಳು ಕಂದಾಯ, ಪಂಚಾಯತ್ ರಾಜ್ ಹಾಗೂ ಸ್ಥಳೀಯ ಸಂಸ್ಥೆಗಳ ಜೊತೆ ಸಮನ್ವಯ ಸಾಧಿಸಿ ಬರ ಪರಿಸ್ಥಿತಿಯನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವಂತೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಸೂಚಿಸಿದರು.
ನಗರದ ಜಿ.ಪಂ.ಕೆಡಿಪಿ ಸಭಾಂಗಣದಲ್ಲಿ ಬರ ನಿರ್ವಹಣೆ ಸಂಬಂಧ ನಡೆದ ಟಾಸ್ಕ್ ಫೋರ್ಸ್ ತಾಲ್ಲೂಕು ಮಟ್ಟದ 2 ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂಬರುವ ದಿನಗಳಲ್ಲಿ ಮುಂಜಾಗ್ರತ ಕ್ರಮವಹಿಸಲು ತಮ್ಮ ತಮ್ಮ ಇಲಾಖೆಗಳಲ್ಲಿ ಅಗತ್ಯ ಕ್ರಮಕೈಗೊಳ್ಳುವ ಸಲುವಾಗಿ ಕ್ರಿಯಾಯೋಜನೆಯ ಅಂದಾಜು ಪಟ್ಟಿ ತಯಾರಿಸುವಂತೆ ಸೂಚಿಸಿದರು.
ಮುಂದುವರೆದು ಸೆಸ್ಕ್ ವತಿಯಿಂದ ಕುಡಿಯುವ ನೀರಿಗೆ ತೊಂದರೆಯಾಗದಂತೆ ವಿದ್ಯುತ್ ಸಂಪರ್ಕ ಕಡಿತಗೊಳಿಸದಿರುವಂತೆ ತಿಳಿಸಿದರು.
ವಿವಿಧ ಇಲಾಖೆಗಳು ಯಾವುದೇ ಸಂದರ್ಭ ಬಂದರೂ ಕೂಡ ಅದನ್ನ ಸಮರ್ಥವಾಗಿ ಎದುರಿಸಲು ಬೇಕಾದ ಅಗತ್ಯ ಕ್ರಮವನ್ನು ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭ ತಹಶೀಲ್ದಾರ್ ಪ್ರವೀಣ್ ಕುಮಾರ್, ತಾ.ಪಂ.ಇಒ ಶೇಖರ್, ನಗರಸಭೆ ಆಯುಕ್ತ ವಿಜಯ್ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.










