ಮಡಿಕೇರಿ,ಡಿ.31: ಕೊಡವ ಕುಟುಂಬಗಳ ನಡುವೆ 2024ರಲ್ಲಿ ನಡೆಯಲಿರುವ ಕುಂಡ್ಯೋಳಂಡ ಹಾಕಿ ನಮ್ಮೆಯ ಲಾಂಛನ ಬಿಡುಗಡೆ ಸಮಾರಂಭ ನಾಪೋಕ್ಲುವಿನ ಕೊಡವ ಸಮಾಜದ ಅಪ್ಪಚ್ಚಕವಿ ಸಭಾಂಗಣದಲ್ಲಿ ನಡೆಯಿತು.
ಕುಂಡ್ಯೋಳಂಡ ಕುಟುಂಬದ ಪಟ್ಟೆದಾರ ಕುಂಡ್ಯೋಳಂಡ ನಾಣಿ ನಾಣಯ್ಯ ಹಾಗೂ ಹಾಕಿ ನಮ್ಮೆಯ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಹಾಗೂ ಹಾಕಿ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಒಲಂಪಿಯನ್ ಡಾ.ಅಂಜಪರವಂಡ ಬಿ.ಸುಬ್ಬಯ್ಯ ಕುಂಡ್ಯೋಳಂಡ ಹಾಕಿ ನಮ್ಮೆಯ ಲಾಂಛನ ಬಿಡುಗಡೆ ಮಾಡಿದರು.
ಹಾಕಿ ಉತ್ಸವದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ, ಈ ವರ್ಷ ನಡೆಯುವ ಹಾಕಿ ಹಬ್ಬ ಕೂಡ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಹಾಕಿ ಹಬ್ಬಕ್ಕೆ ನಮ್ಮ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಂದರ್ಭ 1 ಕೋಟಿ ರೂ. ಅನುದಾನ ಒದಗಿಸಿಕೊಟ್ಟಿದೆ. ಈ ಬಾರಿ ನಮ್ಮ ಸರಕಾರ ಅಧಿಕಾರದಲ್ಲಿ ಇಲ್ಲದಿದ್ದರೂ ಒರ್ವ ಸಂಸದನಾಗಿ ದಾನಿಗಳಿಂದ ಹಾಗೂ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಅತೀ ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಹಾಕಿ ನಮ್ಮೆಯ ಲಾಟರಿ ಟಿಕೆಟ್ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್ ಪೊನ್ನಣ್ಣ, ಹಾಕಿ ನಮ್ಮೆ ಈಗಾಗಲೇ ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದಿದೆ. ಮುಂದೆ ಈ ಹಾಕಿ ಹಬ್ಬ ಗಿನ್ನಿಸ್ ದಾಖಲೆ ಮಾಡುವಂತಾಗಲಿ ಎಂದು ಹಾರೈಸಿದರು.
ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಮಾತನಾಡಿ ಹಾಕಿ ಹಬ್ಬ ನಡೆಸಲು ಸರ್ವರ ಸಹಕಾರ ಅಗತ್ಯ. ಪ್ರತಿಯೊಬ್ಬರು ಕೂಡ ಆಯೋಜಕರೊಂದಿಗೆ ಕೈ ಜೋಡಿಸಬೇಕೆಂದರು.
ಹಾಕಿ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಹಾಗೂ ಒಲಂಪಿಯನ್ ಡಾ.ಅಂಜಪರವಂಡ ಬಿ.ಸುಬ್ಬಯ್ಯ ಮಾತನಾಡಿ, ಹಾಕಿ ಹಬ್ಬ ಆಯೋಜನೆ ಸುಲಭದ ಮಾತಲ್ಲ. ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಮಟ್ಟಕ್ಕಿಂತಲೂ ಹೆಚ್ಚಿನ ತಂಡಗಳು ಪಾಲ್ಗೊಳುವ ಪಂದ್ಯಾಟ ಆಯೋಜನೆ ಒಂದು ಸವಾಲು ಕೂಡ ಹೌದು. ಕುಂಡ್ಯೋಳಂಡ ತಂಡ ಯಶಶ್ವಿಯಾಗಿ ಈ ಸವಾಲನ್ನು ಗೆಲ್ಲಲ್ಲಿ ಎಂದು ಹಾರೈಸಿದರು.
ಕಳೆದ ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ವ್ಯಕ್ತಿಗಳ ಅಂತ್ಯ ಸಂಸ್ಕಾರ ಸೇರಿದಂತೆ ವಿವಿಧ ಸೇವಾ ಕಾರ್ಯದಲ್ಲಿ ತೊಡಗಿಸಿ ಜನರಿಗೆ ಆಪತ್ಬಾಂಧವರಾಗಿ ಕಾರ್ಯನಿರ್ವಹಿಸಿದ ನಾಪೋಕ್ಲುವಿನ ಸೇವಾ ಭಾರತಿ ಸಂಘದ ಸದಸ್ಯರನ್ನು ಶಾಸಕ ಪೊನ್ನಣ್ಣ ಇದೇ ಸಂದರ್ಭ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ನಾಪೋಕ್ಲು ಕೊಡವ ಸಮಾಜದ ಮಾಜಿ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಬಿದ್ದಾಟಂಡ ಎಸ್.ತಮ್ಮಯ್ಯ, ಕುಲ್ಲೇಟಿರ ಅರುಣ್ ಬೇಬ, ಯುಕೋ ಸಂಘಟನೆ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ವೆಸ್ಟ್ ಕೊಳಕೇರಿ ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷ ಕೇಟೋಳಿರ ಎಸ್.ಕುಟ್ಟಪ್ಪ, ಮುದ್ದಂಡ ದೇವಯ್ಯ, ಕುಂಡ್ಯೋಳಂಡ ಹಾಕಿ ನಮ್ಮೆ ಅಧ್ಯಕ್ಷ ರಮೇಶ್ ಮುದ್ದಯ್ಯ, ಕುಂಡ್ಯೋಳಂಡ ಸುಬ್ಬಯ್ಯ, ಹಾಕಿ ನಮ್ಮೆಯ ಸಂಚಾಲಕ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ, ಕಾರ್ಯದರ್ಶಿ ಬಿಪಿನ್ ಬೆಳ್ಯಪ್ಪ, ಖಜಾಂಚಿ ವಿಶು ಪೂವಯ್ಯ, ಹಾಕಿ ಕೂರ್ಗ್ನ ಪಳಂಗಂಡ ಲವಕುಮಾರ್, ಕಾವೇರಿ ಸೇನೆ ಸಂಚಾಲಕ ರವಿಚಂಗಪ್ಪ, ಎಂ.ಪಿ.ದೇವಯ್ಯ ಹಾಗೂ ಕುಂಡ್ಯೋಳಂಡ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.