ಮಡಿಕೇರಿ ಜ.2 : ಅನಾದಿ ಕಾಲದಿಂದಲೂ ಕೊಡವ ಸಂಸ್ಕೃತಿಯನ್ನು ಆಚರಿಸುತ್ತ, ಕೊಡಗಿನ ಮೂಲನಿವಾಸಿಗಳಾಗಿ ಬಾಳುತ್ತಿರುವ ಕೊಡವ ಪಾಲೆ ಜನಾಂಗದ ಸರ್ವತೋಮುಖ ಅಭಿವೃದ್ದಿಗೆ ಕಟಿಬದ್ದನಾಗಿದ್ದು, ಹಿಂದೆ ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ಇದೀಗ ಪರಿಶಿಷ್ಟ ಜಾತಿ ಎಂದು ತಪ್ಪಾಗಿ ಪರಿಗಣನೆ ಆಗಿರುವುದು ತನ್ನ ಗಮನಕ್ಕೆ ಬಂದಿದ್ದು, ಕೆಲವೇ ದಿನಗಳಲ್ಲಿ ಆಗಿರುವ ತಾಂತ್ರಿಕ ಅಡಚಣೆಯನ್ನು ಸರಿಪಡಿಸಿ, ಅಧಿಕೃತವಾಗಿ ಪರಿಶಿಷ್ಟ ಪಂಗಡ ಎಂದು ಮರು ಆದೇಶ ಮಾಡಿಸಲಾಗುವುದು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭರವಸೆ ನೀಡಿದರು.
ಮೂರ್ನಾಡಿನಲ್ಲಿ ನಡೆದ ಕೊಡವ ಪಾಲೆ ಜನಾಂಗದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕೊಡವ ಪಾಲೆ ಅಥವಾ ಅರಮನೆಪಾಲೆ ಜನಾಂಗವು ಕೊಡವ ಸಂಸ್ಕೃತಿಯನ್ನು ಪಾಲಿಸುತ್ತಿದ್ದು, ಅವರದ್ದೇ ಶೈಲಿಯ ಶ್ರಮದಿಂದ ಶಾಂತಿಯುತವಾಗಿ ಬಾಳುತ್ತಿರುವ ಜನಾಂಗವಾಗಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ಜನಸಂಖ್ಯೆ ಕುಸಿತ ಕಾಣುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಈ ಜನಾಂಗದ ರಕ್ಷಣೆ ನಮ್ಮ ಸರ್ಕಾರದ ಹೊಣೆಯಾಗಿದೆ ಅದನ್ನು ತಾವು ಪಾಲಿಸುತ್ತೇನೆ ಎಂದರು. ಈ ಹಿಂದೆ ಸರ್ಕಾರಿ ದಾಖಲೆಗಳಲ್ಲಿ ಪರಿಶಿಷ್ಟ ಪಂಗಡ ಎಂದಿದ್ದು, ಇತ್ತೀಚೆಗೆ ಪರಿಶಿಷ್ಟ ಜಾತಿ ಎಂದು ಬದಲಾಗಿದ್ದು, ಆಗಿರುವ ತೊಂದರೆಯನ್ನು ಕಾನೂನು ವ್ಯಾಪ್ತಿಯಲ್ಲಿ ಸರಿಪಡಿಸುವುದಾಗಿ ಭರವಸೆ ನೀಡಿದರು.
ಅಖಿಲಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಮಾತನಾಡಿ, ಕೊಡವ ಪಾಲೆ ಜನಾಂಗವು ಅನಾದಿಕಾಲದಿಂದಲೂ ಕೊಡವ ಸಂಸ್ಕೃತಿಯನ್ನು ಪಾಲಿಸುತ್ತಾ, ನಿಷ್ಠೆ ಮತ್ತು ಪ್ರಾಮಾಣಿಕ ಜನಾಂಗವಾಗಿ ಬಾಳುತ್ತಿದೆ. ಅವರ ಮೂಲ ಕಸುಬನ್ನು ತಪ್ಪದೇ ಪಾಲಿಸುತ್ತಿದ್ದಾರೆ. ಕೊಡಗಿನ ಎಲ್ಲಾ ಮೂಲ ನಿವಾಸಿ ಜನಾಂಗಗಳು ಅವರವರ ಕುಲ ಮತ್ತು ಸಂಪ್ರದಾಯಕ್ಕೆ ಬದ್ಧರಾಗಿ ಒಗ್ಗಟ್ಟಿನಿಂದ ಬಾಳುವಂತೆ ಆಗಬೇಕು ಎಂದರು.
ಕೊಡವ ಭಾಷಿಕ ಮೂಲನಿವಾಸಿ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಶ್ ನಾಣಯ್ಯ ಮಾತನಾಡಿ, ಸರ್ವ ಕೊಡವ ಭಾಷಿಕ ಜನಾಂಗಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಸಂಸ್ಕೃತಿಯನ್ನು ಬೆಳೆಸುವತ್ತ ಒಟ್ಟಾಗಿ ಸಾಗಬೇಕಾಗಿದೆ, ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳು ನಡೆಯಬೇಕು ಎಂದು ಹೇಳಿದರು.
ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಮಾತನಾಡಿ, ಕೊಡವ ಪಾಲೆ ಜನಾಂಗ ತಮ್ಮ ಮೂಲತನದ ಅಸ್ತಿತ್ವದ ಅನ್ವೇಷಣೆಗೆ ಮುಂದಾಗಿ ಜನಾಂಗೀಯ ದಾಖಲೆ ರಚಿಸಬೇಕು, ತಮ್ಮ ಮೂಲತನವನ್ನ ಉಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಲಿ, ಇಂತ ಕಾರ್ಯಕ್ರಮಗಳಲ್ಲಿ ಎಲ್ಲರೂ ಪಾಲ್ಗೊಳ್ಳುವ ಮೂಲಕ ಸಹಬಾಳ್ವೆಗೆ ನಾಂದಿಯಾಗಲಿ ಎಂದರು.
ಜನಾಂಗದ ಹಿರಿಯ, ಕೊಡಗು ಮೂಲನಿವಾಸಿ ಅರಮನೆಪಾಲೆ ಸಮಾಜದ ಅಧ್ಯಕ್ಷ ಜಿ.ಚೆನಿಯ ನಾಪೋಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಂಞಿರ ಸಾಬುತಿಮ್ಮಯ್ಯ, ಕೊಡಗು ಹೆಗ್ಗಡೆ ಸಮಾಜದ ಕಾರ್ಯದರ್ಶಿ ಪಡಿಞಾರಂಡ ಪ್ರಭುಕುಮಾರ್, ಕೊಡಗು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ, ಅಹಿಂದ ಅಧ್ಯಕ್ಷ ತೋರೆರ ಮುದ್ದಯ್ಯ, ಕೊಡವ ಭಾಷಿಕ ಸಮುದಾಯ ಕೂಟದ ಕಾರ್ಯದರ್ಶಿ ಮೊಳ್ಳೆಕುಟ್ಟಡ ದಿನುಬೋಜಪ್ಪ, ಪೊಲೀಸ್ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಸೇರಿದಂತೆ ಕೊಡವ ಪಾಲೆ ಜನಾಂಗದ ಪ್ರಮುಖರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಎಲ್ಲಾ ಅಥಿತಿಗಳನ್ನು ಸಮಾಜದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಮಾಜದ ಸದಸ್ಯರಿಗಾಗಿ ನಡೆದ ಕ್ರೀಡಾಕೂಟದ ಪುರುಷರ ಕ್ರಿಕೆಟ್ ಮತ್ತು ಮಹಿಳೆಯರ ಥ್ರೋಬಾಲ್ನಲ್ಲಿ ಅಂಜಿಕೂಟ್ ವಾರಿಯರ್ಸ್ ಕಂಡಿಮಕ್ಕಿ ತಂಡ ಪ್ರಥಮ, ಕ್ರಿಕೆಟ್ ದ್ವಿತೀಯ ಸ್ಥಾನವನ್ನು ಜಿಲ್ಲಾ ಸಮಿತಿ ಪಡೆದರೆ, ಥ್ರೋಬಾಲ್ ದ್ವಿತೀಯ ಸ್ಥಾನವನ್ನು ನಾಪೋಕ್ಲು ಪೇರೂರು ತಂಡ ಪಡೆಯಿತು. ಕ್ರೀಡಾಕೂಟದಲ್ಲಿ ಮಕ್ಕಳು ಮತ್ತು ವಯಸ್ಕರಿಗೆ ಹಲವಾರು ಆಟೋಟಗಳನ್ನು ಆಯೋಜಿಸಲಾಗಿತ್ತು.