ಮಡಿಕೇರಿ ಜ.3 : ಸೋಮವಾರಪೇಟೆಯಲ್ಲಿ ನೂತನವಾಗಿ ನಿರ್ಮಿಸಿರುವ ‘ಸಿಂಥೆಟಿಕ್ ಹಾಕಿ ಟರ್ಫ್’ ಮೈದಾನದ ಉದ್ಘಾಟನೆ ಸಂದರ್ಭ ಶಿಷ್ಟಾಚಾರ ಪಾಲಿಸಿಲ್ಲ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಹಿಂದಿನ ಬಿಜೆಪಿ ಸರಕಾರದಲ್ಲಿ ಕ್ರೀಡಾ ಸಚಿವರಾಗಿದ್ದ ಎಂ.ಪಿ.ಅಪ್ಪಚ್ಚುರಂಜನ್ ಅವರ ಪ್ರಯತ್ನದಿಂದ ಸೋಮವಾರಪೇಟೆಯಲ್ಲಿ ನೂತನವಾಗಿ ಟರ್ಫ್ ಮೈದಾನ ನಿರ್ಮಾಣವಾಗಿದೆ. ಆದರೆ ಮೈದಾನದ ಉದ್ಘಾಟನಾ ಸಮಾರಂಭಕ್ಕೆ ಅವರನ್ನು ಆಹ್ವಾನಿಸಿಲ್ಲ. ಸಂಸದ ಪ್ರತಾಪ್ ಸಿಂಹ, ಎಂಎಲ್‌ಸಿ ಸುಜಾ ಕುಶಾಲಪ್ಪ ಹಾಗೂ ಚೌಡ್ಲು ಗ್ರಾಮ ಪಂಚಾಯ್ತಿ ಅಧ್ಯಕ್ಷರನ್ನು ಆಹ್ವಾನಿಸದೇ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಮೈದಾನ ಉದ್ಘಾಟನೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರ ಕಾರನ್ನು ತಡೆಯಲು ಯತ್ನಿಸಿದರು.
ಈ ಸಂದರ್ಭ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಗಂಗಾಧರಪ್ಪ ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಬಿಜೆಪಿ ತಾಲೂಕು ಅಧ್ಯಕ್ಷ ಮನುಕುಮಾರ್, ನಗರ ಅಧ್ಯಕ್ಷ ಸೋಮೇಶ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ದೀಪಕ್, ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಅಭಿಮನ್ಯು ಕುಮಾರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಂಸದರು, ಎಂಎಲ್‌ಸಿ ಅವರ ಬಳಿ ಮಾತನಾಡಿದ್ದೇನೆ. ಮೈದಾನ ನಿರ್ಮಾಣಕ್ಕೆ ಕೊಡುಗೆ ನೀಡಿದವರಿಗೆ ಗೌರವ ನೀಡುವಂತಹ ಕೆಲಸವಾಗಬೇಕು ಎಂದರು.
ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಅವರು ಮಾತನಾಡಿ ಬಾಲಕಿಯರ ರಾಷ್ಟçಮಟ್ಟದ ಹಾಕಿ ಪಂದ್ಯಾವಳಿ ಜ.4ರಿಂದ ಈ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ. ಒಬ್ಬ ಜನಪ್ರತಿನಿಧಿಯಾಗಿ ಮೈದಾನದ ಕಾಮಗಾರಿಯನ್ನು ಪೂರ್ಣಗೊಳಿಸಿದ್ದೇನೆ. ರಾಜಕೀಯ ಚುನಾವಣೆ ಸಂದರ್ಭ ಮಾತ್ರ, ಅಭಿವೃದ್ದಿ ಕೆಲಸ ಮುಖ್ಯವಾಗಿದ್ದು, ಈ ಬಗ್ಗೆ ಅವರವರು ಅವಲೋಕನ ಮಾಡಿಕೊಳ್ಳಬೇಕೆಂದು ಹೇಳಿದರು.











