ಮಡಿಕೇರಿ ಜ.4 : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಎಲ್ಲಾ 28 ಸ್ಥಾನಗಳಲ್ಲೂ ಸ್ಪರ್ಧಿಸಲಿದ್ದು, ಆಸಕ್ತ ಸ್ಪರ್ಧಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಿದೆ ಎಂದು ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೇಶವಮೂರ್ತಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂದರ್ಶನವು ಜ.6 ಮತ್ತು 7 ರಂದು ಪಕ್ಷದ ಬೆಂಗಳೂರಿನ ಕಚೇರಿಯಲ್ಲಿ ನಡೆಯಲಿದೆ. ಈ ವಿಚಾರದ ಕುರಿತು ಪಕ್ಷದ ಕೇಂದ್ರ ಕಚೇರಿಯಲ್ಲಿ ಈಗಾಗಲೇ ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಆಸಕ್ತರು ಸಂದರ್ಶನಕ್ಕೆ ಹಾಜರಾಗಬಹುದೆಂದು ತಿಳಿಸಿದರು.
ಆಕಾಂಕ್ಷಿಗಳು ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರಬಾರದು. ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರಬಾರದು. ಪಕ್ಷದ ಸಿದ್ದಾಂತಗಳಿಗೆ ಬದ್ದರಾಗಿರಬೇಕು. ಜನಪರ ಕಾಳಜಿ, ಸಂವಿಧಾನದಲ್ಲಿ ನಂಬಿಕೆ, ರಾಜ್ಯದ ಅಭಿವೃದ್ಧಿಯ ಚಿಂತನೆ ಇರುವವರು ಆಕಾಂಕ್ಷಿಗಳ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ 9611720802 ಸಂಪರ್ಕಿಸಬಹುದಾಗಿದೆ ಎಂದ ಅವರು, ಸಂದರ್ಶನದ ನಂತರ ರಾಜ್ಯ ಸಮಿತಿಯು ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಸಂಭಾವ್ಯ ಅಭ್ಯಾರ್ಥಿಗಳೆಂದು ಘೋಷಿಸುತ್ತದೆ ಎಂದರು.
ಕೆಆರ್ಎಸ್ ಪಕ್ಷವು ಪಕ್ಷದ ಆರಂಭದಿಂದಲೂ ಎಲ್ಲಾ ಚುನಾವಣೆಗಳಲ್ಲಿ ಸ್ಪರ್ಧಿಸಿ, ನಿರಂತರವಾಗಿ ಜನರನ್ನು ತಲುಪುವ ಕೆಲಸ ಮಾಡುತ್ತಿದೆ. 2023ರ ಮೇ ನಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 195 ಕ್ಷೇತ್ರಗಳಿಂದ ಸ್ಪರ್ಧಿಸಿದ್ದು, ಪಕ್ಷವ ನಿರಂತರವಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ವ್ಯವಸ್ಥೆಯಲ್ಲಿನ ಅಕ್ರಮ, ಅನ್ಯಾಯ, ದುರಾಡಳಿತ, ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾ, ನಾಡಿನ ನೆಲ, ಜಲ, ಭಾಷೆಯ ಸಂರಕ್ಷಣೆಗಾಗಿ ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡುತ್ತಾ ಬಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ದಕ್ಷಿಣ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಕಾರ್ಯದರ್ಶಿಗಳಾದ ಲಿಂಗರಾಜು, ಕೆ.ಆರ್.ಪ್ರಭುಸ್ವಾಮಿ, ನಂಜುಂಡ, ಶಂಬುಲಿಂಗ ಉಪಸ್ಥಿತರಿದ್ದರು.