ಮಡಿಕೇರಿ ಜ.5 : ಪ್ರಾಚೀನ ಆದಿಮ ಸಂಜಾತ ಸೂಕ್ಷ್ಮ ಜನಾಂಗ ಕೊಡವರನ್ನು ವಿಶ್ವ ರಾಷ್ಟ್ರ ಸಂಸ್ಥೆಯ ನಿರ್ಣಯ 217A (III) ರನ್ವಯ ಮಾನ್ಯತೆ ನೀಡಿ ಕೊಡವರ ಸ್ವಯಂ-ನಿರ್ಣಯದ ಹಕ್ಕುಗಳನ್ನು ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಗೌರವಿಸಬೇಕು ಮತ್ತು ಖಾತರಿಪಡಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಒತ್ತಾಯಿಸಿದೆ.
ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುವ ಧರಣಿ ಸತ್ಯಾಗ್ರಹ ನಡೆಸಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಹಾಗೂ ಪ್ರಮುಖರು ಅಂತರರಾಷ್ಟ್ರೀಯ ಕಾನೂನಿನಡಿ ಕೊಡವರಿಗೆ ಮಾನ್ಯತೆ, ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ಮತ್ತು ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡಬೇಕೆಂದು ಒತ್ತಾಯಿಸಿದರು.
ಸಂವಿಧಾನದ ಆರ್ಟಿಕಲ್ 244 R/W 6ನೇ ಮತ್ತು 8ನೇ ಶೆಡ್ಯೂಲ್ ಪ್ರಕಾರ, ಕೊಡವರು ಸ್ಥಳೀಯ ಕೊಡವ ಜನರ ಸಾಂಪ್ರದಾಯಿಕ ಮತ್ತು ಅವಿಭಾಜ್ಯ ತಾಯ್ನಾಡಿನ ಹಕ್ಕನ್ನು ಹೊಂದಿದ್ದಾರೆ. ಇದು ಸ್ವಯಂ ಆಳ್ವಿಕೆಯೊಂದಿಗೆ ಕೊಡವಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತ ಪ್ರದೇಶವನ್ನು ಸ್ಥಾಪಿಸಬೇಕೆಂಬ ಬೇಡಿಕೆಯನ್ನು ಸಿಎನ್‌ಸಿ ರೂಪಿಸಿದೆ ಎಂದು ನಾಚಪ್ಪ ಹೇಳಿದರು.
ಈ ಹಕ್ಕೊತ್ತಾಯಗಳ ಪರ ಪ್ರತಿಪಾದಿಸಿರುವ ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಸಿಎನ್‌ಸಿ ಬೇಡಿಕೆಗೆ ಪೂರಕವಾಗಿ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದು, ಕೆಲವೇ ದಿನಗಳಲ್ಲಿ ತೀರ್ಪು ಹೊರ ಬೀಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಾಚೀನ ಆದಿಮ ಸಂಜಾತ ಅತ್ಯಂತ ಸೂಕ್ಷ್ಮ ಜನಾಂಗ ಕೊಡವರನ್ನು ವಿಶ್ವ ರಾಷ್ಟ್ರ ಸಂಸ್ಥೆಯ ನಿರ್ಣಯ 217ಎ (III) ರನ್ವಯ ಮಾನ್ಯತೆ ನೀಡಿ ಕೊಡವರ ಸ್ವಯಂ-ನಿರ್ಣಯ ಹಕ್ಕುಗಳನ್ನು ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಗೌರವಿಸಬೇಕು ಮತ್ತು ಖಾತರಿಪಡಿಸಬೇಕು.
ಸಂವಿಧಾನದ ಪರಿಚ್ಛೇದ 340-342 ಅಡಿಯಲ್ಲಿ ಕೊಡವ ಸಮುದಾಯಕ್ಕೆ ಎಸ್‌ಟಿ ಟ್ಯಾಗ್ ನೀಡಬೇಕು. ಕೊಡವರು ಅಳಿವಿನಂಚಿನಲ್ಲಿ ಕ್ಷೀಣಿಸುತ್ತಿರುವ ಸಮುದಾಯವಾಗಿರುವುದರಿಂದ ಸಂವಿಧಾನದಡಿ ರಕ್ಷಣೆ ನೀಡಬೇಕು. ಸಿಎನ್‍ಸಿ ಸಲ್ಲಿಸಿದ ರಿಟ್ ಅರ್ಜಿಯನ್ನು ಪರಿಗಣಿಸಿ ಹೈಕೋರ್ಟ್ ನೀಡಿದ ಆದೇಶದ ಪ್ರಕಾರ ಕೊಡವರನ್ನು ಸಂವಿಧಾನದ ಪರಿಶಿಷ್ಟ ಪಟ್ಟಿಯಲ್ಲಿ ಸೇರಿಸಲು ಅನುಕೂಲವಾಗುವಂತೆ ಸಮಗ್ರ ಜನಾಂಗೀಯ ಕುಲಶಾಸ್ತ್ರ ಅಧ್ಯಯನವನ್ನು ನಡೆಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನಾಚಪ್ಪ ಒತ್ತಾಯಿಸಿದರು.
ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅವರ ಮೂಲಕ ಡಾ.ಸುಬ್ರಮಣಿಯನ್ ಸ್ವಾಮಿ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರತಿನಿಧಿಗಳಿಗೆ ಸಲ್ಲಿಸಿದರು.
ಸಿಎನ್‌ಸಿ ಪ್ರಮುಖರಾದ ಬೊಳ್ಳಮ್ಮ ನಾಣಯ್ಯ, ಲೆಫ್ಟಿನೆಂಟ್ ಕರ್ನಲ್ ಪಾರ್ವತಿ, ಬೊಟ್ಟಂಗಡ ಸವಿತಾ, ಚೋಳಪಂಡ ಜ್ಯೋತಿ ನಾಣಯ್ಯ, ಅಪ್ಪನೆರವಂಡ ಶಾಂತಿ ಅಚ್ಚಪ್ಪ, ಚೆಪ್ಪುಡಿರ ಜಾನ್ಸಿ ಪೊನ್ನಪ್ಪ, ಜಮ್ಮಡ ಮೋಹನ್, ಕಾಂಡೇರ ಸುರೇಶ್, ಅಜ್ಜಿಕುಟ್ಟೀರ ಲೋಕೇಶ್, ಬೊಟ್ಟಂಗಡ ಗಿರೀಶ್, ಕಿರಿಯಮಾಡ ಶೆರಿನ್, ಚಂಬಂಡ ಜನತ್, ಮಂದಪಂಡ ಮನೋಜ್, ಕಾಟುಮಣಿಯಂಡ ಉಮೇಶ್, ಪಾರ್ವಂಗಡ ನವೀನ್, ಮಣವಟ್ಟಿರ ಚಿಣ್ಣಪ್ಪ, ಪುಟ್ಟಿಚಂಡ ದೇವಯ್ಯ, ಕೂಪದಿರ ಸಾಬು, ನಂದಿನೆರವಂಡ ವಿಜು, ನಂದಿನೆರವಂಡ ಅಪ್ಪಯ್ಯ, ನಂದಿನೆರವಂಡ ಅಯ್ಯಣ್ಣ, ಚೋಳಪಂಡ ನಾಣಯ್ಯ, ಅಜ್ಜಿನಿಕಂಡ ರಾಹುಲ್, ಮಣವಟ್ಟಿರ ನಂದಾ, ಬೊಟ್ಟಂಗಡ ಜಪ್ಪು ಸತ್ಯಾಗ್ರಹದಲ್ಲಿ ಪಾಲ್ಗೊಂಡು ಗುರು- ಕಾರೋಣ, ಸೂರ್ಯ-ಚಂದ್ರ, ಕಾವೇರಿ, ಭೂಮಿ ತಾಯಿ, ಪ್ರಕೃತಿ ಮಾತೆ ಮತ್ತು ಸಂವಿಧಾನದ ಹೆಸರಿನಲ್ಲಿ ಸಿಎನ್‌ಸಿಯ ರಾಜ್ಯಾಂಗದತ್ತ ಬೇಡಿಕೆಯ ಪರ ಪ್ರಮಾಣ ವಚನ ಸ್ವೀಕರಿಸಿದರು.









