ಮಡಿಕೇರಿ ಜ.6 : ಹುಬ್ಬಳ್ಳಿಯಲ್ಲಿ ಕರಸೇವಕರನ್ನು ಬಂಧಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಪೊಲೀಸರ ಕ್ರಮವನ್ನು ಖಂಡಿಸಿ ಹಿಂದೂ ಜಾಗರಣಾ ವೇದಿಕೆಯ ವಿರಾಜಪೇಟೆ ತಾಲೂಕು ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ವಿರಾಜಪೇಟೆ ಪೊಲೀಸ್ ಉಪ ಅಧಿಕ್ಷಕರ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಯುವ ಘಟಕದ ಪ್ರಮುಖ ಸುನೀಲ್, ರಾಷ್ಟ್ರವೇ ಪ್ರಸ್ತುತ ಪ್ರಭು ಶ್ರೀ ರಾಮಚಂದ್ರರ ಭೌವ್ಯ ಮಂದಿರ ನಿರ್ಮಾಣ ಉದ್ಘಾಟನೆಯ ಹೊಸ್ತಿಲ್ಲಿದೆ. ಇಂತಹ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರನ್ನು ಬಂಧನ ಮಾಡಿ ಹಿಂದೂ ಸಮಾಜಕ್ಕೆ ಕಳಂಕ ತರುವಂತೆ ಮಾಡಿರುವುದು ಖಂಡನೀಯ ಎಂದರು.
ಹಬ್ಬದ ವಾತವರಣದಲ್ಲಿರುವ ದೇಶದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದು, ಹಿಂದೂಗಳನ್ನು ಧಮನ ಮಾಡುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಹಿಂದೂಗಳ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದ ಅವರು, ಇಲ್ಲವಾದಲ್ಲಿ ಸಂಘಟನೆಯ ವತಿಯಿಂದ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಹಿಂದೂ ಜಾಗರಣ ವೇದಿಕೆ ವಿರಾಜಪೇಟೆ ತಾಲೂಕು ಘಟಕದ ಸಂಚಾಲಕ ಗಣೇಶ್ ಬಿಟ್ಟಂಗಾಲ, ಸಿ.ಕೆ.ರವಿ, ಅಮ್ಮತ್ತಿ ಜಿಲ್ಲಾ ಸಂಪರ್ಕ ಪ್ರಮುಖ್ ಟೋಳಿ, ಸಹ ಸಂಯೋಜಕ ವಿನಾಯಕ ಅಮ್ಮತ್ತಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರದೀಶ್, ಮೋಹನ್ ಹಾಗೂ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಮನವಿ ಪತ್ರವನ್ನು ಡಿವೈಎಸ್ಪಿ ಮೋಹನ್ ಕುಮಾರ್ ಅವರಿಗೆ ಮನವಿ ನೀಡಿದರು. ಇಲಾಖೆಯ ವತಿಯಿಂದ ಬೀಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.









