ಮಡಿಕೇರಿ ಜ.11 : ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರದ ವತಿಯಿಂದ ಜ.17 ರಂದು ಚೆಟ್ಟಳ್ಳಿಯಲ್ಲಿ ಪ್ಯಾಶನ್ ಫ್ರೂಟ್ ಮತ್ತು ಪಪ್ಪಾಯ ಹಣ್ಣಿನ ವೈವಿಧ್ಯತೆಯ ಪ್ರದರ್ಶನ ಮತ್ತು ಚರ್ಚೆ ನಡೆಯಲಿದೆ ಎಂದು ಕೇಂದ್ರದ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಡಾ. ಎಸ್.ರಾಜೇಂದ್ರ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ಯಾಶನ್ ಫ್ರೂಟ್ ಮತ್ತು ಪಪ್ಪಾಯ ಹಣ್ಣಿನಲ್ಲಿರುವ ವೈವಿಧ್ಯತೆಯನ್ನು ದಾಖಲು ಮಾಡುವ ಉದ್ದೇಶದಿಂದ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರದಲ್ಲಿ ಪ್ರದರ್ಶನ ಮತ್ತು ಚರ್ಚೆ ನಡೆಯಲಿದ್ದು, ಬೆಳೆಗಾರರು ಬೀಜದಿಂದ ಬೆಳೆದಂತಹ ಸ್ಥಳೀಯ ಅಥವಾ ಸಂರಕ್ಷಿತ ಪ್ಯಾಶನ್ ಫ್ರೂಟ್ ಮತ್ತು ಪಪ್ಪಾಯ ಹಣ್ಣಿನ ಮಾದರಿಗಳನ್ನು ಪ್ರದರ್ಶಿಸಬಹುದು ಎಂದು ಮಾಹಿತಿ ನೀಡಿದರು.
ಕೀಟ ವಿಜ್ಞಾನಿ ಎ.ಟಿ.ರಾಣಿ ಮಾತನಾಡಿ, ಆದ್ರ್ರ ಉಷ್ಣ ವಲಯದ ವಾತವರಣದಲ್ಲಿ ಬೆಳೆದಿರುವ ಪ್ಯಾಶನ್ ಫ್ರೂಟ್ ಮತ್ತು ಪಪ್ಪಾಯ ಹಣ್ಣಿನ ಮಾದರಿಗಳನ್ನು ಪ್ರದರ್ಶಿಸಬಹುದು, ಒಬ್ಬ ಬೆಳೆಗಾರ ಎಷ್ಟು ಮಾದರಿಗಳನ್ನಾದರು ಪ್ರದರ್ಶಿಬಹುದು. ಆದರೆ ಪ್ಯಾಶನ್ ಫ್ರೂಟ್ ಮತ್ತು ಪಪ್ಪಾಯ ಹಣ್ಣಿನ ಮಾದರಿಗಳು ಒಂದಕ್ಕಿಂತ ಒಂದು ವಿಭಿನ್ನವಾಗಿರುವಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಹಣ್ಣು ವಿಜ್ಞಾನಿ ಡಾ.ಮುರಳಿಧರ್ ಮಾತನಾಡಿ, ಪ್ರದರ್ಶಿಸಲ್ಪಟ್ಟ ಪ್ಯಾಶನ್ ಫ್ರೂಟ್ ಮತ್ತು ಪಪ್ಪಾಯ ಹಣ್ಣುಗಳಲ್ಲಿ ಉತ್ತಮವಾದ ಮತ್ತು ವಿಶೇಷವಾದ ಗುಣಗಳನ್ನು ಹೊಂದಿರುವ ಮೂರು ಹಣ್ಣಿನ ಮಾದರಿಗಳನ್ನು ಆಯ್ಕೆ ಮಾಡಿ, ಮೊದಲನೇ ಬಹುಮಾನವಾಗಿ ರೂ.10 ಸಾವಿರ, ಎರಡನೇ ಬಹುಮಾನ ರೂ.7 ಸಾವಿರ ಹಾಗೂ ಮೂರನೇ ಬಹುಮಾನವಾಗಿ ರೂ.3 ಸಾವಿರ ನೀಡಿ ಪ್ರೋತ್ಸಾಹಿಸಲಾಗುವುದು. ಅಲ್ಲದೇ ಹಣ್ಣಿನ ಮಾದರಿಗಳನ್ನು ಪ್ರದರ್ಶಿಸಿದ ಎಲ್ಲಾ ಬೆಳೆಗಾರರಿಗೆ ಭಾಗವಹಿಸುವಿಕೆಯ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉತ್ತಮವಾದ ಮತ್ತು ವಿಶೇಷ ಗುಣಗಳನ್ನು ಹೊಂದಿರುವ ವೈವಿಧ್ಯಮಯ ಪ್ಯಾಶನ್ ಫ್ರೂಟ್ ಮತ್ತು ಪಪ್ಪಾಯ ಗಿಡಗಳನ್ನು ಗುರುತಿಸಿ ಸಂರಕ್ಷಿಸುವುದು, ಹಣ್ಣಿನ ಬಗ್ಗೆ ಅರಿವನ್ನು ಮೂಡಿಸುವುದು ಮತ್ತು ಅವುಗಳ ಬಗ್ಗೆ ಉತ್ತಮ ಕೃಷಿ ಪದ್ದತಿಗಳು ಮತ್ತು ಮೌಲ್ಯವರ್ಧನೆ ಬಗ್ಗೆ ತಿಳಿಸಿಕೊಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಹಣ್ಣು ವಿಜ್ಞಾನಿ ನಯನ ದೀಪಕ್ ಉಪಸ್ಥಿತರಿದ್ದರು.