ಮಡಿಕೇರಿ ಜ.11 : ಗಣರಾಜ್ಯೋತ್ಸವ ಅಂಗವಾಗಿ ಅಮಿಟಿ ಯೂನೈಟೆಡ್ ಎಫ್ಸಿ ವತಿಯಿಂದ ಜ.26 ರಿಂದ 28ರ ವರೆಗೆ ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ 5+2 ಆಟಗಾರರ ರಾಜ್ಯ ಮಟ್ಟದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ ಎಂದು ಸಂಘದ ಸದಸ್ಯ ಎಸ್.ಎ.ಸತ್ತಾರ್ ಇಚ್ಚ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಂಟಿಕೊಪ್ಪದ ಗದ್ದೆಹಳ್ಳದ ಸೈಟ್ ಮೈದಾನದಲ್ಲಿ ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪಂದ್ಯಾವಳಿ ನಡೆಯಲಿದ್ದು, ಆಸಕ್ತ ತಂಡಗಳು ಮೈದಾನ ಶುಲ್ಕ ನೀಡಿ ತಂಡಗಳ ಹೆಸರು ನೋಂದಾಯಿಸಿಕೊಳ್ಳುವಂತೆ ತಿಳಿಸಿದರು.
ಪಂದ್ಯಾವಳಿಯ ಸಲುವಾಗಿ ಜ.26ರಂದು ಸುಂಟಿಕೊಪ್ಪದ ನುಜುಮಾ ನುರಿಯಾ ಮದ್ರಾಸ್ ಹಾಲ್ನಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಹೇಳಿದರು.
ಕ್ರೀಡಾಕೂಟದ ಉಸ್ತುವಾರಿ ಎಂ.ಎಂ.ನೌಫಲ್ ಮಾತನಾಡಿ, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, 40 ತಂಡಗಳ ನಿರೀಕ್ಷಿಸಲಾಗಿದೆ ಎಂದರು.
ಪ್ರಥಮ ಸ್ಥಾನ ಪಡೆದ ತಂಡಕ್ಕೆ 66,666 ನಗದು ಮತ್ತು ಆಕರ್ಷಕ ರೋಸ್ವುಡ್ನಿಂದ ತಯಾರಿಸಿದ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 33,333 ನಗದು ಮತ್ತು ಆಕರ್ಷಕ ರೋಸ್ವುಡ್ನಿಂದ ತಯಾರಿಸಿದ ಆಕರ್ಷಕ ಟ್ರೋಫಿ ಹಾಗೂ ವಿವಿಧ ವೈಯಕ್ತಿಕ ಬಹುಮಾನವನ್ನು ನೀಡಲಾಗುವುದೆಂದರು. ಹೆಚ್ಚಿನ ಮಾಹಿತಿಗಾಗಿ 6366680931, 6362245190 ಸಂಪರ್ಕಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ 30 ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದೆಂದು ತಿಳಿಸಿದರು.
ಅಮಿಟಿ ಯೂನೈಟೆಡ್ ಎಫ್ಸಿ ಸಂಘವು ಕ್ರೀಡೆ ಜೊತೆಗೆ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಪಂದ್ಯಾವಳಿಯಿಂದ ಬಂದ ಹಣವನ್ನು ಬಡ ವಿದ್ಯಾರ್ಥಿಗಳ ಶಿಕ್ಷಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸುತ್ತಿದೆ ಎಂದರು.
ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳ ಸಂಖ್ಯೆ ಹೆಚ್ಚಿದ್ದರೂ ಮೈದಾನದ ಕೊರತೆ ಇದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಈಗಾಗಲೇ ಶಾಸಕರ ಗಮನ ಸೆಳೆಯಲಾಗಿದ್ದು, ಮೈದಾನವನ್ನು ನಿರ್ಮಿಸಿಕೊಡುವ ಭರವಸೆ ನೀಡಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೂರ್ಗ್ ಬ್ಲಡ್ ಫೌಂಡೇಶನ್ ಸದಸ್ಯ ಎಂ.ಇ.ಅಬ್ಬಾಸ್, ಅಮಿಟಿ ಯೂನೈಟೆಡ್ ಎಫ್ಸಿ ಸದಸ್ಯರಾದ ಎಂ.ಎಂ.ಶರೀಫ್, ಕೆ.ಸಾಹೀರ್ ಉಪಸ್ಥಿತರಿದ್ದರು. ಇದೇ ಸಂದರ್ಭ ಚಿತ್ತಾರ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕಿ ಸವಿತಾ ರೈ ಪಂದ್ಯಾವಳಿಯ ಲೋಗೋವನ್ನು ಬಿಡುಗಡೆಗೊಳಿಸಿದರು.










