ಮಡಿಕೇರಿ ಜ.11 : ಇದೇ ಜನವರಿ ತಿಂಗಳಲ್ಲಿ ಶಿವಯೋಗಿ ಸಿದ್ದರಾಮೇಶ್ವರ, ಮಹಾಯೋಗಿ ವೇಮನ, ಅಂಬಿಗರ ಚೌಡಯ್ಯ ಮತ್ತು ಮಡಿವಾಳ ಮಾಚಿದೇವ ಜಯತ್ಯೋತ್ಸವ ಆಚರಣೆ ಸಂಬಂಧ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯು ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜ.15 ರಂದು ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ನಿಗದಿಯಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಸಭೆಯ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಮಾತನಾಡಿದ ಭೋವಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷರಾದ ಡಿ.ಸುಜೀತ್ ಅವರು ಜನವರಿ, 15 ರಂದು ಮಕರ ಸಂಕ್ರಾಂತಿ ಹಬ್ಬ ಇರುವುದರಿಂದ ಜನವರಿ, 22 ರಂದು ಕಾರ್ಯಕ್ರಮ ಆಯೋಜಿಸುವಂತಾಗಬೇಕು ಎಂದು ಕೋರಿದರು.
ಜ.21 ರಂದು ಅಂಬಿಗರ ಚೌಡಯ್ಯ ಜಯಂತಿ ನಿಗದಿಯಾಗಿದ್ದು, ಜ.21 ರ ಬದಲಾಗಿ, 22 ರಂದು ಕಾರ್ಯಕ್ರಮ ಆಯೋಜಿಸುವಂತೆ ಕಾವೇರಿ ಮೀನುಗಾರರ ಸಂಘದ ಮಾಜಿ ಅಧ್ಯಕ್ಷರಾದ ಇ.ಎಸ್.ಶ್ರೀನಿವಾಸ್ ಅವರು ಮನವಿ ಮಾಡಿದರು.
ಈ ಎರಡು ಕಾರ್ಯಕ್ರಮವನ್ನು ನಗರದ ಗಾಂಧಿ ಭವನದಲ್ಲಿ ಜ.22 ರಂದು ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಮಡಿವಾಳ ಮಾಚಿದೇವ ಜಯಂತಿಯು ಫೆ.1 ರಂದು ನಿಗಧಿಯಾಗಿದ್ದು, ಫೆಬ್ರುವರಿ 1 ರ ಬದಲಾಗಿ ಫೆಬ್ರವರಿ, 25 ರಂದು ನಗರದ ವೀರಭದ್ರೇಶ್ವ ದೇವಸ್ಥಾನದಲ್ಲಿ ಕಾರ್ಯಕ್ರಮ ಆಯೋಜನೆಗೆ ಅವಕಾಶ ಮಾಡುವಂತೆ ಮಡಿವಾಳರ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಪಿ.ಜಿ.ಸುಕುಮಾರ್ ಅವರು ಕೋರಿದರು.
ಇದಕ್ಕೆ ಜಿಲ್ಲಾಧಿಕಾರಿ ಅವರು ಸಹಮತ ವ್ಯಕ್ತಪಡಿಸಿದರು. ವಿವಿಧ ಮಹನೀರಯ ಜಯಂತಿ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದ ಜೊತೆ ಕೈಜೋಡಿಸುವಂತೆ ಜಿಲ್ಲಾಧಿಕಾರಿ ಕೋರಿದರು.
ಪ್ರಮುಖರಾದ ಕೆ.ಎಸ್.ಮಹೇಶ್, ವಿನಾಯಕ, ಎಂ.ಕೆ.ಸುಬ್ರಮಣಿ, ಪಿ.ಜಿ.ಮಂಜುನಾಥ, ಪಿ.ಜಿ.ಕಮಲ್, ಎಂ.ಬಿ.ವಿಷ್ಣು, ಚೇತನ್ ಇತರರು ಹಲವು ಮಾಹಿತಿ ನೀಡಿದರು.