ಮಡಿಕೇರಿ ಜ.13 : ಮುಂದೆ ಬೇಸಿಗೆ ಎದುರಾಗುತ್ತಿದ್ದು ಕುಡಿಯುವ ನೀರಿನ ಪೂರೈಕೆಗೆ ಯಾವುದೇ ರೀತಿಯ ಸಮಸ್ಯೆಯಾಗಬಾರದು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದ್ದಾರೆ.
ಪೊನ್ನಂಪೇಟೆ ತಾಲ್ಲೂಕು ಪಂಚಾಯಿತಿಯ ಸಾಮಥ್ರ್ಯ ಸೌಧದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಟಾಸ್ಕ್ ಫೊರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಲ ಜೀವನ್ ಮೀಷನ್ ಯೋಜನೆಯಡಿ ಬಾಕಿ ಇರುವ ಎಲ್ಲಾ ಕಾಮಗಾರಿಗಳು ತುರ್ತಾಗಿ ಪೂರ್ಣಗೊಳ್ಳಬೇಕು, ಯಾವುದೇ ಸಾರ್ವಜನಿಕ ದೂರುಗಳು ಬಾರದ ರೀತಿಯಲ್ಲಿ ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ವಿದ್ಯುತ್ ಇಲಾಖೆಯಿಂದ ಸಮರ್ಪವಾಗಿ ವಿದ್ಯುತ್ ನ್ನು ಪೂರೈಸಿ ಎಎಒ ನೀರಿನ ಟ್ಯಾಂಕರ್ ಗಳಿಂದ ನೀರನ್ನು ಪಂಪ್ ಮಾಡಲು ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಕ್ರಮವಹಿಸಲು ಸೆಸ್ಕ್ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಇದ್ದಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಪಟ್ಟಿ ಮಾಡಿ ನೀಡುವಂತೆ ತಿಳಿಸಿದರು. ಬೋರ್ ವೆಲ್, ಮೋಟಾರ್ ಪಂಪ್, ವಿದ್ಯುತ್, ನೀರಿನ ಟ್ಯಾಂಕರ್ ಹಾಗೂ ಇನ್ನೀತರ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ವಿರಾಜಪೇಟೆ ತಹಶೀಲ್ದಾರ್ ರಾಮಚಂದ್ರ, ಪ್ರವೀಣ್ ಕುಮಾರ್, ತಾ.ಪಂ.ಇ.ಒ.ಗಳಾದ ಕೆ.ಸಿ.ಅಪ್ಪಣ್ಣ, ಶೇಖರ್, ವಿವಿಧ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.