ಸೋಮವಾರಪೇಟೆ ಜ.13 : ಹಚ್ಚಹಸಿರಿನ ಮಲೆನಾಡು ಪ್ರದೇಶವಾದ ಪುಷ್ಪಗಿರಿ ತಪ್ಪಿನ ಶಾಂತಳ್ಳಿ ಗ್ರಾಮದಲ್ಲಿ ನೆಲೆಯಾಗಿರುವ, ಚೋಳರ ಕಾಲದ ಐತಿಹ್ಯ ಹೊಂದಿರುವ ಇತಿಹಾಸ ಪ್ರಸಿದ್ಧ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವರ 65ನೇ ವಾರ್ಷಿಕ ಮಹಾರಥೋತ್ಸವಕ್ಕೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಇಂದಿನಿಂದ ಜಾತ್ರೋತ್ಸವಕ್ಕೆ ಚಾಲನೆ ದೊರೆಯಲಿದೆ.
ಸುಮಾರು 900ಕ್ಕೂ ಅಧಿಕ ವರ್ಷಗಳ ಹಿಂದಿನ ಇತಿಹಾಸ ಹೊಂದಿರುವ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದ ಮಹಾ ರಥೋತ್ಸವಕ್ಕೆ ಕೊಡಗು ಮಾತ್ರವಲ್ಲದೆ ಸುತ್ತಮುತ್ತಲ ಜಿಲ್ಲೆಗಳಿಂದಲೂ ಸಹಸ್ರಾರು ಮಂದಿ ಭಕ್ತರು ಆಗಮಿಸಿ, ತಮ್ಮ ಇಷ್ಟಾರ್ಥಗಳಿಗೆ ಪ್ರಾರ್ಥನೆ ಸಲ್ಲಿಸುವುದು, ಹರಕೆ ಒಪ್ಪಿಸುವುದು ವಾಡಿಕೆ. ಜಾತಿ, ಮತ, ಪಂಥ, ಧರ್ಮಾತೀತವಾಗಿಯೂ ಇಲ್ಲಿ ಪ್ರಾರ್ಥನೆ ಸಲ್ಲಿಸುವುದು, ಇಷ್ಟಾರ್ಥ ನೆರವೇರಿದ ಮೇಲೆ ಹರಕೆ ಒಪ್ಪಿಸುವುದು ವಿಶೇಷ.
ಜ.13 (ಇಂದು) ಬೆಳ್ಳಿ ಬಂಗಾರ ದಿನ ಆಚರಣೆಯೊಂದಿಗೆ ಸಂಜೆ 6.30 ರಿಂದ ಪ್ರಸಕ್ತ ವರ್ಷದ ಜಾತ್ರೆ ಪ್ರಾರಂಭೋತ್ಸವ ಪೂಜೆ ನಡೆಯಲಿದೆ. ಜ.14 ರಂದು ‘ಮಕರ ಸಂಕ್ರಮಣ ಕರುವಿನ ಹಬ್ಬ’ ಹಾಗೂ 7 ಗಂಟೆಗೆ ದೇಗುಲದ ಗರುಡ ಕಂಬದ ಅಗ್ರಪೀಠದಲ್ಲಿ ತುಪ್ಪದ ನಂದಾದೀಪವನ್ನು ಬೆಳಗಿಸಲಾಗುತ್ತದೆ. ಇದರೊಂದಿಗೆ ಅಂಕುರಾರ್ಪಣೆ ಪೂಜೆ, ಮಹಾಮಂಗಳಾರತಿ, ಪ್ರಾರ್ಥನೆ, ಪ್ರಸಾದ ಸ್ವೀಕಾರ ನೆರವೇರಲಿದೆ.
ಜ.15 ರಂದು ‘ಅರಸು ಬಲ ಸೇವೆ’ ಪೂಜೆ ನಡೆಯಲಿದೆ. ಸಂಜೆ 7.30 ರಿಂದ ಗಣಹೋಮ, ರಂಗಪೂಜೆ, ಬೀದಿ ಉತ್ಸವ, ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಲಿದೆ. ಶ್ರೀ ಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ಜ.15 ಹಾಗೂ 16 ರಂದು ಮಹಿಳೆಯರಿಗೆ ಅಂತರ್ ಜಿಲ್ಲಾ ಮಟ್ಟದ ಥ್ರೋಬಾಲ್, ಪರುಷರಿಗೆ ಕಬ್ಬಡ್ಡಿ ಮತ್ತು ವಾಲಿಬಾಲ್ ಪಂದ್ಯಾವಳಿಗಳು ನಡೆಯಲಿದ್ದು ಜ.16 ರಂದು 65ನೇ ಮಹಾರಥೋತ್ಸವ ಜರುಗಲಿದೆ.
ಜ.17 ರಂದು ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ದೇವಾಲಯದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ.ಎಂ.ಲೋಕೇಶ್ ಮಾಹಿತಿ ನೀಡಿದ್ದಾರೆ.
ಜಾತ್ರೋತ್ಸವ ಅಂಗವಾಗಿ ಜ.15 ರಿಂದ 17ರ ವರೆಗೆ ಪ್ರತಿದಿನ ದೇವಾಲಯದಲ್ಲಿ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನಾದ ನಡೆಯಲಿದೆ. ಇದರೊಂದಿಗೆ ಫಲಪುಷ್ಪ, ವಸ್ತು ಪ್ರದರ್ಶನ, ವಿಶೇಷ ವಸ್ತುಗಳಿಗೆ ಬಹುಮಾನ ನೀಡಲಾಗುವುದು.









