ಸೋಮವಾರಪೇಟೆ ಜ.13 : ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ವಿದ್ಯಾಸಂಸ್ಥೆಗಳಿಗೆ ಸರ್ಕಾರದಿಂದ ಅನುದಾನ ಕಲ್ಪಿಸುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅಭಿಪ್ರಾಯಿಸಿದರು.
ತಾಲ್ಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಅಂಗವಾಗಿ ಒಕ್ಕಲಿಗರ ಸಮುದಾಯಭವನದಲ್ಲಿ ನಡೆದ ಕುವೆಂಪು ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಒಕ್ಕಲಿಗರ ಸಂಘದ ಕೊಡುಗೆ ಅಪಾರ. ಒಂದು ವಿದ್ಯಾಸಂಸ್ಥೆ ಬೆಳೆಯಬೇಕಾದರೆ ಪೋಷಕರ ಪ್ರೋತ್ಸಾಹ ಮುಖ್ಯ. ದಾನಗಳಲ್ಲಿ ವಿದ್ಯಾದಾನ ಅತೀ ಶ್ರೇಷ್ಟವಾದುದು. ವಿದ್ಯಾವಂತರು ಈ ದೇಶದ ಆಸ್ತಿಯಾಗಿದ್ದಾರೆ. ಪೋಷಕರು ಮಕ್ಕಳಿಗೆ ಉನ್ನತಶಿಕ್ಷಣ ನೀಡಬೇಕು ಎಂದರು.
ಸಂಘದ ಕೆಲ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು. ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಕೇಂದ್ರಿಕರಿಸಬೇಕು. ಶಿಕ್ಷಕರ ಸಲಹೆಗಳನ್ನು ಪಡೆದು ಹೆಚ್ಚಿನ ಅಂಕ ಗಳಿಸಬೇಕು.
ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ ಮಾತನಾಡಿ, ಶೇ.98 ರಷ್ಟು ಗ್ರಾಮೀಣ ಮಕ್ಕಳು ಕುವೆಂಪು ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿದ್ದಾರೆ ಎಂಬುದು ನಮ್ಮ ಹೆಮ್ಮೆಯಾಗಿದೆ. ಕಳೆದ ಆರು ವರ್ಷಗಳಿಂದಲೂ ಎಸ್‍ಎಸ್‍ಎಲ್‍ಸಿಯಲ್ಲಿ ಶೇ.100ರಷ್ಟು ಫಲಿತಾಂಶ ಬರುತ್ತಿದೆ. ಪ್ರಸಕ್ತ ವರ್ಷದಿಂದ ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಪ್ರಾರಂಭಿಸಲಾಗಿದೆ ಎಂದು ಹೇಳಿದರು.
2023-24ನೇ ಸಾಲಿನ ಉತ್ತಮ ವಿದ್ಯಾರ್ಥಿಯಾಗಿ 6ನೇ ತರಗತಿ ರಿಧಾನ್, ಎಸ್‍ಎಸ್‍ಎಲ್‍ಸಿ ಟಾಪರ್ ಆಗಿ ವೈ.ಎಸ್.ಧನ್ಯ ಹಾಗೂ ದ್ವಿತೀಯ ಪಿಯುಸಿ ಪ್ರನುತಾ ಟಾಪರ್ ಗೌರವಕ್ಕೆ ಭಾಜನರಾದರು.
1ನೇ ತರಗತಿಯಿಂದ 9ನೇ ತರಗತಿವರೆಗೆ ಅತೀ ಹೆಚ್ಚು ಅಂಕಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳು ಕ್ರಮವಾಗಿ ಅದಿರ್ಥಿ ಗೌಡ ಮತ್ತು ಪೂರ್ವಿಕಾ, ನವಾಮಿಕ, ಸಮೃತ ವಿಠಲ್, ಇಶಾನಿ ಮತ್ತು ವನಿಶಾ, ಕೋಮಲ್, ಸಂಯಮ ವಿಠಲ್, ದೀಕ್ಷಿತಾ ನಾರಾಯಣ, ಚರಿತಾ, ಸಿರಿ, ಧನ್ಯತಾ, ಆದ್ವಿ, ಎಚ್.ಆರ್. ಜೀವಿತಾ ಅವರುಗಳನ್ನು ಗೌರವಿಸಲಾಯಿತು. ರಾಷ್ಟ್ರೀಯ ಮಟ್ಟದ ಕರಾಟೆ ಪಟು ಮಾನಸ, ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಪ್ರತೀಕ್ಷಾ, ಷಟಲ್ ಬ್ಯಾಡ್ಮಿಂಟನ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಧನ್ಯ ಮತ್ತು ಪುಷ್ಪಾಂಜಲಿ, ಚಿತ್ರಕಲೆಯಲ್ಲಿ ರಾಜ್ಯ ಮಟ್ಟದಲ್ಲಿ ಭಾಗವಹಿಸಿದ್ದ ಸಧನ್, 5000ಮೀ ಓಟದಲ್ಲಿ ರಾಜ್ಯಮಟ್ಟದ ಸ್ಪರ್ಧಿ ರಕ್ಷಿತ್, ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದ ಬಾಲಕಿಯರ ವಾಲಿಬಾಲ್ ತಂಡದ ಬಿಂದು, ಜೀವಿತ, ವಿದ್ಯಾಗೌರಿ, ರಿಷಿಕಾ, ಹನಿ, ಕೃತಿ, ವರ್ಣಿಕ ಅವರುಗಳನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಚ್.ಎನ್.ರವೀಂದ್ರ, ಬಿಇಒ ಭಾಗ್ಯಮ್ಮ, ಒಕ್ಕಲಿಗರ ಸಂಘದ ಕಾರ್ಯದರ್ಶಿ ಎನ್.ಬಿ.ಗಣಪತಿ, ಖಜಾಂಚಿ ಜಿ.ಪಿ.ಲಿಂಗರಾಜು, ಶಾಲಾ ವ್ಯವಸ್ಥಾಪಕ ಕೆ.ಎಂ.ಜಗದೀಶ್, ಪ್ರಗತಿಪರ ಮಹಿಳಾ ವೇದಿಕೆ ಅಧ್ಯಕ್ಷೆ ಪೂರ್ಣಿಮಾ ಗೋಪಾಲ್, ಮುಖ್ಯಶಿಕ್ಷಕಿ ಮಿಲ್ಡ್ರೆಡ್ ಗೋನ್ಸಾಲ್ವೆಸ್ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿನಿಯರಾದ ಹಿಮಾನಿ ಮತ್ತು ಧನ್ಯ ಕಾರ್ಯಕ್ರಮ ನಿರೂಪಿಸಿದರು.