ವಿರಾಜಪೇಟೆ, ಜ.13 : ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು, ಜನರ ಸೇವೆಯೇ ಮುಖ್ಯ ಗುರಿಯಾಗಿಸಿಕೊಳ್ಳಬೇಕೆಂದು ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೇಳಿದರು.
ವಿರಾಜಪೇಟೆ ಬಳಿಯ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕೂರ್ಗ್ ಇನ್‍ಸ್ಟಿಟ್ಯೊಟ್ ಆಫ್ ಡೆಂಟಲ್ ಸೈನ್ಸ್ ಆಯೋಜಿಸಲಾಗಿದ್ದ 2023-24ನೇ ಸಾಲಿನ ವಿದ್ಯಾರ್ಥಿ ಸಂಘ ಉದ್ಘಾಟನೆ ಹಾಗೂ ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದರು.
ಕೊಡಗು ದಂತ ವೈದ್ಯಕೀಯ ಕಾಲೇಜು ತನ್ನ ಅತ್ಯುತ್ತಮ ಸೌಲಭ್ಯಗಳ ಮೂಲಕ ಸಮಾಜಕ್ಕೆ ಉತ್ತಮ ದಂತ ಸೇವೆಯನ್ನು ನೀಡುತ್ತಿರುವುದು ಶ್ಲಾಘನಿಯ. ವಿದ್ಯಾರ್ಥಿಗಳ ಜೀವನ ಮಹತ್ವವಾದದ್ದು, ಮಾದಕ ವಸ್ತುಗಳನ್ನು ದೂರಮಾಡಿ ಮುಂದಿನ ಭವಿಷ್ಯದ ಕಡೆಗೆ ಗಮನಹರಿಸುವ ಮೂಲಕ ಶ್ರದ್ಧೆಯಿಂದ ಗುರಿ ಮುಟ್ಟುವಂತಾಗಬೇಕು ಎಂದರು.
ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆ, ಕಲೆ ಪಾಠ್ಯೆತರ ಚಟುವಟಿಕೆಗಳಲ್ಲಿಯು ಭಾಗವಹಿಸಬೇಕು ಕರೆ ನೀಡಿದರು.
ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಸುನೀಲ್ ಮುದ್ದಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ, ಸಭೆಯನ್ನುದ್ದೇಶಿಸಿ ಕೊಡಗು ದಂತ ಕಾಲೇಜಿನ ವಿದ್ಯಾರ್ಥಿಗಳ ಸಂಘ ಉತ್ತಮ ನಾಯಕತ್ವ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಸ್ಪರ್ಧಾ ಚಟುವಟಿಕೆಗಳಿಗೆ ಒತ್ತು ನೀಡುವಂತ ವೇದಿಕೆಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸು ವಂತಾಗಿದೆ. ನಮ್ಮ ಕಾಲೇಜಿನಲ್ಲಿ ಕಲಿತಿರುವ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಭಾಗವಹಿಸುತ್ತಿದ್ದಾರೆ. ಕಾಲೇಜು ಅಂತರಾಷ್ಟ್ರಿಯ ಮಟ್ಟದಲ್ಲಿ ಒಡಂಬಡಿಕೆ ಮಾಡಿಕೊಂಡಿರುವುದ ರಿಂದ ಉತ್ತಮ ಬೆಳವಣಿಗೆಯಾಗಿರುವುದಾಗಿ ಹೇಳಿದರು.
ಡಾ. ಅನ್‍ಮೊಲ್ ಕಾಲ್ಹ ಅವರು ಪ್ರಾಸ್ತಾವಿಕಾಗಿ ಮಾತನಾಡಿ, ವಿದ್ಯಾರ್ಥಿಗಳ ಸಂಘ ಮೌಲ್ಯಧರಿತ ಶಿಕ್ಷಣ ಮತ್ತು ಉತ್ತಮ ನಾಯಕತ್ವ ಗುಣಗಳನ್ನು ಬೆಳಸಿಕೊಳ್ಳು ವಂತಾಗಬೇಕು ಎಂದರು.
ವೈಧ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಸಿ.ಪೊನ್ನಪ್ಪ ಅವರು 2023-24 ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋದಿಸಿದರು. ವಿವಿಧ ಸ್ನಾತಕೋತ್ತರ ಪದವಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಡಾ,ಶ್ರಯನ ನಾಣಯ್ಯ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿಲ್ನಾ ವಂದಿಸಿದರು. ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.