ಮಡಿಕೇರಿ ಜ.13 : “ದ್ವೇಷ ಬಿಟ್ಟು ದೇಶ ಕಟ್ಟು” ಪರಿಕಲ್ಪನೆಯೊಂದಿಗೆ ಮಡಿಕೇರಿ ಮುಸ್ಲಿಂ ಒಕ್ಕೂಟ ರಚನೆಗೊಂಡಿದೆ. ಒಕ್ಕೂಟದ ಸಂಚಾಲಕರಾಗಿ ಲಿಯಾಖತ್ ಆಲಿ ಆಯ್ಕೆಯಾಗಿದ್ದಾರೆ.
ಒಕ್ಕೂಟ ರಚನೆಯಾದ ಕುರಿತು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಲಿಯಾಖತ್ ಆಲಿ, ಭಾವೈಕ್ಯತೆಯ ಬೀಡು ಕೊಡಗು ಜಿಲ್ಲೆಯಲ್ಲಿ ಎಲ್ಲರೂ ಸೌಹಾರ್ಧತೆಯಿಂದ ಜೀವನ ಸಾಗಿಸಬೇಕು ಎನ್ನುವುದು ಒಕ್ಕೂಟದ ಉದ್ದೇಶ ಎಂದರು.
ಅಲ್ಪಸಂಖ್ಯಾತ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿದೆ, ಆದ್ದರಿಂದ ಒಕ್ಕೂಟ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಲಿದೆ. ರಾಜಕೀಯ ರಹಿತವಾದ ಈ ಸಂಘಟನೆ ವಿಚಾರವಂತಿಕೆಯಿಂದ ಕಾರ್ಯನಿರ್ವಹಿಸಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಮುಸ್ಲಿಂ ಮಹಿಳೆಯರ ಬಗ್ಗೆ ನೀಡಿರುವ ಹೇಳಿಕೆ ನಮಗೆ ನೋವುಂಟು ಮಾಡಿದೆ. ಆದರೆ ಶಾಂತಿಯುತ ಬದುಕಿಗೆ ಪೂರಕವಾಗಿ ನಡೆದುಕೊಳ್ಳುವುದೇ ಒಕ್ಕೂಟದ ಗುರಿಯಾಗಿದ್ದು, ಈ ರೀತಿಯ ಹೇಳಿಕೆಗಳಿಗೆ ಪ್ರತಿ ಹೇಳಿಕೆ ನೀಡುವುದು ನಮ್ಮ ಉದ್ದೇಶವಲ್ಲ ಎಂದು ಸ್ಪಷ್ಟಪಡಿಸಿದರು.
ರಾಜಕೀಯ ರಹಿತವಾದ ಈ ಸಂಘಟನೆ ಅಲ್ಪಸಂಖ್ಯಾತರು ಮಾತ್ರವಲ್ಲದೆ ಎಲ್ಲಾ ಅಸಹಾಯಕರಿಗೂ ಸಹಾಯ ಮಾಡಲಿದೆ. ಶಿಕ್ಷಣ ಮತ್ತು ಸರ್ಕಾರದ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಲಿದೆ ಎಂದರು.
ಒಕ್ಕೂಟದ ಪ್ರಮುಖ ಎಸ್.ಐ.ಮುನೀರ್ ಅಹಮ್ಮದ್ ಮಾತನಾಡಿ “ದ್ವೇಷ ಬಿಟ್ಟು ದೇಶ ಕಟ್ಟು” ಎನ್ನುವುದನ್ನು ಒಕ್ಕೂಟ ಪ್ರತಿಪಾದಿಸಲಿದೆ, ಇದರಲ್ಲಿರುವ ಪದಾಧಿಕಾರಿಗಳು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.
ಅಲ್ಪಸಂಖ್ಯಾತರು ಮಾತ್ರವಲ್ಲದೆ ಎಲ್ಲಾ ಜನಾಂಗದ ಬಡವರಿಗೂ ಸೌಲಭ್ಯ ದೊರೆಯುವಂತೆ ಒಕ್ಕೂಟ ನೋಡಿಕೊಳ್ಳಲಿದೆ. ಮಾಹಿತಿಯ ಕೊರತೆಯಿಂದ ಸರ್ಕಾರಿ ಸೌಲಭ್ಯದಿಂದ ವಂಚಿತರಾಗುವವರನ್ನು ಗುರುತಿಸಿ ಸೌಲಭ್ಯ ತಲುಪಿಸುವ ಕೆಲಸ ಮಾಡಲಾಗುವುದು. ಸಮಾಜದ ಸ್ವಾಸ್ಥ್ಯ ಕೆಡದಂತೆ ಒಕ್ಕೂಟ ಎಚ್ಚರಿಕೆಯನ್ನು ವಹಿಸಲಿದೆ, ಚುನಾವಣೆ ಸಂದರ್ಭ ಕೆಲವು ವ್ಯಕ್ತಿಗಳು ನೀಡುವ ಹೇಳಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲೂ ಚಿಂತಿಸಲಾಗುವುದು. ಮುಸ್ಲಿಂ ಮಹಿಳೆಯರು ಮಾತ್ರವಲ್ಲ, ಯಾವುದೇ ಜನಾಂಗದ ಮಹಿಳೆಯರನ್ನು ಕೂಡ ಯಾರೂ ಅವಹೇಳನ ಮಾಡಬಾರದು ಎಂದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಮುಖರಾದ ಸಹ ಸಂಚಾಲಕ ಖಲೀಲ್ ಬಾಷಾ, ಜಹೀರ್ ಅಹಮ್ಮದ್, ಮಹಮ್ಮದ್ ಯಾಕುಬ್ ಹಾಗೂ ರೌವೂಫ್ ಎಂ.ಎನ್ ಉಪಸ್ಥಿತರಿದ್ದರು.








