ವಿರಾಜಪೇಟೆ ಜ.13 : ಸ್ವಾಮಿ ವಿವೇಕಾನಂದರು ಯುವ ಜನರಿಗೆ ಮಾದರಿಗಳಾಗಿದ್ದು, ಯುವ ಜನಾಂಗದ ಕನಸನ್ನು ಕಂಡ ಮಹಾನ್ ಚೇತನರಾಗಿದ್ದಾರೆ ಎಂದು ಸೆಂಟ್ ಆನ್ಸ್ ಪದವಿ ಕಾಲೇಜು ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಅಭಿಪ್ರಾಯಪಟ್ಟರು.
ಸೆಂಟ್ ಆನ್ಸ್ ಪದವಿ ಕಾಲೇಜಿನ ಸ್ನಾತಕೋತ್ತರ ಎಂ.ಕಾಂ. ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರ ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು, ವಿಶೇಷವಾಗಿ ಆದ್ಯಾತ್ಮಿಕ ಕ್ಷೇತ್ರಕ್ಕೆ ತನ್ನದೆಯಾದ ಕೊಡುಗೆಯನ್ನು ನೀಡಿದ್ದಾರೆ. ಶಿಸ್ತು, ಏಕಾಗ್ರತೆ, ಧ್ಯಾನ, ತಾಳ್ಮೆಗಳೆಂಬ ಅಂಶಗಳನ್ನು ಇಡೀ ವಿಶ್ವಕ್ಕೆ ಸಾರಿದ್ದಾರೆ ಎಂದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಅರ್ಜುನ್ ಮಾತನಾಡಿ, ಸ್ವಾಮಿ ವಿವೇಕಾನಂದರು ಭಾರತೀಯ ಸಮಾಜಕ್ಕೆ ತನ್ನದೆಯಾದ ಕೊಡುಗೆಯನ್ನು ನೀಡಿದ್ದು, ನವ ಸಮಾಜದ ನಿರ್ಮಾತೃರಾಗಿದ್ದಾರೆ. ಅವರು ಸಾಮಾಜಿಕ ಮತ್ತು ಆಧ್ಯಾತ್ಮಿಕ ಚಿಂತಕರಾಗಿದ್ದು, ಯುವಕರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡಿದ್ದಾರೆ ಎಂದು ನುಡಿದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮ, ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.
ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ಎಂ.ಕಾಂ. ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ತತ್ವ ಚಿಂತನೆಗಳನ್ನು ಒಳಗೊಂಡ ಕಿರು ಪ್ರಹಸನವನ್ನು ಪ್ರದರ್ಶಿಸಿದರು.









