ಮಡಿಕೇರಿ ಜ.13 : ವಿಶೇಷ ಚೇತನರಿಗೆ ರಾಜ್ಯಾದ್ಯಂತ ಬಸ್‍ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ವಿಶೇಷ ಚೇತನರ ಸಂಘದಿಂದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾ ಪಂಚಾಯತ್ ಭವನದ ಮುಂಭಾಗ ಜಮಾಯಿಸಿದ ಸಂಘದ ಪ್ರಮುಖರು ಹಾಗೂ ಪದಾಧಿಕಾರಿಗಳು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾ ವಿಶೇಷ ಚೇತನರ ಸಂಘದ ಅಧ್ಯಕ್ಷ ಜೆ.ಎ.ಮಹದೇಶ್ವರ, ಸರ್ಕಾರ ವಿಶೇಷ ಚೇತನರನ್ನು ಮರೆಯುತ್ತಿದ್ದು, ವಿಶೇಷ ಚೇತನರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ವಿಫಲವಾಗಿದೆ. ತಕ್ಷಣವೇ ವಿಆರ್‍ಡಬ್ಲ್ಯೂಗಳಿಗೆ ಖಾಯಮಾತಿ ಹಾಗೂ ಸೇವಾ ಭದ್ರತೆ ಒದಗಿಸಬೇಕು, ಸಮಯಕ್ಕೆ ಸರಿಯಾಗಿ ಗೌರವಧನ ನೀಡಬೇಕು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಮತ್ತು ಔಷಧಿ ದೊರೆಯುವಂತೆ ಮಾಡಬೇಕು, 5 ಸಾವಿರ ಮಾಸಿಕ ಭತ್ಯೆ, ವಸತಿ ವ್ಯವಸ್ಥೆ, ವಿಶೇಷ ಚೇತನರಿಗೆ ಪ್ರತ್ಯೇಕ ಬಿಪಿಎಲ್ ಕಾರ್ಡ್ ನೀಡಬೇಕೆಂದು ಒತ್ತಾಯಿಸಿದರು.
ಸಂಘದ ಕಾರ್ಯದರ್ಶಿ ತಿರುಮಲೇಶ್ವರ್, ನಿರ್ದೇಶಕರಾದ ಕೆ.ಎಂ.ಹಸ್ಸನ್, ವೀಣಾ, ಹರೀಶ್, ಜಯ ಕುಮಾರ್, ಮಿಲನ್ ಮತ್ತಿತರರು ಪಾಲ್ಗೊಂಡಿದ್ದರು.








