ಮಡಿಕೇರಿ ಜ.13 : ಕೊಡಗು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಟಿತಗೊಂಡಿದ್ದು, ಮೂಲಭೂತ ಸೌಲಭ್ಯಗಳ ಕೊರತೆ ಗ್ರಾಮಸ್ಥರನ್ನು ಕಾಡಿದೆ ಎಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ಆರೋಪಿಸಿದ್ದಾರೆ.
“ಆಮ್ ಆದ್ಮಿ ಪಾರ್ಟಿಯ ನಡೆ ಹಳ್ಳಿಯ ಕಡೆ” ಕಾರ್ಯಕ್ರಮದ ಭಾಗವಾಗಿ ಮಡಿಕೇರಿ ತಾಲ್ಲೂಕಿನ ವಿವಿಧೆಡೆ ಸಂಚರಿಸಿದ ಅವರು ಜಿಲ್ಲೆಯ ಗ್ರಾಮಗಳನ್ನು ಕಾಡುತ್ತಿರುವ ಕೊರತೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಕಟ್ಟೆಮಾಡು, ಮರಗೋಡು, ಹಾಕತ್ತೂರು, ಮೇಕೇರಿ, ಕೆ.ನಿಡುಗಣೆ, ಗಾಳಿಬೀಡು, ವಣಚಲು, ಕಾಟಕೇರಿ, ಮದೆ, ಬೆಟ್ಟತ್ತೂರು, ಬಲ್ಲಮಾವಟಿ, ಎಮ್ಮೆಮಾಡು, ಪಾರಾಣೆ ಮತ್ತು ಮೂರ್ನಾಡು ಗ್ರಾಮಗಳಿಗೆ ಭೇಟಿ ನೀಡಲಾಗಿದೆ. ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಿಸಲಾಗಿದ್ದು, ಸರ್ಕಾರಿ ಶಾಲೆ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಕೊರತೆ ಕಂಡು ಬಂದಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಂಖ್ಯೆ ಕಡಿಮೆ ಇದ್ದು, ಮೂಲಭೂತ ಸೌಲಭ್ಯದ ಅಗತ್ಯತೆಯು ಇದೆ. ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆಯಿಂದ ಆರೋಗ್ಯ ಕೇಂದ್ರಗಳೇ ರೋಗಗ್ರಸ್ತವಾಗಿವೆ ಎಂದು ಆರೋಪಿಸಿದರು.
ಕಲ್ಮಕಾಡು, ಹಮ್ಮಿಯಾಲ, ವಣಚಲು, 1ನೇ ಮೊಣ್ಣಂಗೇರಿ, ಕಾಲೂರು ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳು ಮುಚ್ಚಲ್ಪಟ್ಟಿವೆ. ವೈದ್ಯರು ಇಲ್ಲದೆ ಇರುವುದರಿಂದ ರೋಗಿಗಳು ಚಿಕಿತ್ಸೆಗಾಗಿ ದೂರದ ಮಡಿಕೇರಿ ನಗರದ ಆಸ್ಪತ್ರೆಗೆ ಹೋಗಬೇಕಾಗಿದೆ. ಜಿಲ್ಲಾ ಕೇಂದ್ರ ಸ್ಥಾನದ ಸಮೀಪವೇ ಇರುವ ಗಾಳಿಬೀಡು ಗ್ರಾಮಕ್ಕೆ ಕೇವಲ ಒಂದು ಸರ್ಕಾರಿ ಬಸ್ ಇದ್ದು, ಖಾಸಗಿ ಬಸ್ ಗಳ ವ್ಯವಸ್ಥೆ ಇಲ್ಲದೆ ಇರುವುದರಿಂದ ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಮದೆ, ಬೆಟ್ಟತ್ತೂರು ಗ್ರಾಮದ ಜನ ಕೂಡ ಸಾರಿಗೆ ವ್ಯವಸ್ಥೆ ಇಲ್ಲದೆ ಕಷ್ಟಪಡುತ್ತಿದ್ದು, ದುಬಾರಿ ಶುಲ್ಕದ ಆಟೋ ಮತ್ತು ಜೀಪ್ ಗಳನ್ನೇ ಅವಲಂಬಿಸಬೇಕಾಗಿದೆ.
ಚೇರAಬಾಣೆ, ಬೇಂಗೂರು, ಬಿ.ಬಾಡಗ ಮೂಲಕ ಬಲ್ಲಮಾವಟಿ ರಸ್ತೆ ಅಭಿವೃದ್ಧಿಯಾಗಿಲ್ಲ, ಸೇತುವೆ ಅಪೂರ್ಣ ಸ್ಥಿತಿಯಲ್ಲಿದೆ. ಮಳೆಗಾಲದಲ್ಲಿ ಸಂಚಾರ ಮಾಡಲು ಅಸಾಧ್ಯವಾಗಿದೆ. ಈ ಭಾಗದಲ್ಲಿ ಮೊಬೈಲ್ ಟವರ್ ಕಾರ್ಯ ನಿರ್ವಹಿಸುತ್ತಿಲ್ಲ, ನೆಟ್ ವರ್ಕ್ ಸಮಸ್ಯೆ ಕಾಡುತ್ತಿದೆ ಎನ್ನುವ ಅಸಮಾಧಾನವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ ಎಂದು ಭೋಜಣ್ಣ ಸೋಮಯ್ಯ ಹೇಳಿದರು.
ಎಮ್ಮೆಮಾಡು ಗ್ರಾಮದಲ್ಲಿ ಆರೋಗ್ಯ ಕೇಂದ್ರ, ಪಶು ವೈದ್ಯಕೀಯ ಕೇಂದ್ರ ಮತ್ತು ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ನಾಪೋಕ್ಲು ಪಟ್ಟಣದಲ್ಲಿ ಕಸ ವಿಲೇವಾರಿ ಮತ್ತು ತ್ಯಾಜ್ಯ ನಿರ್ವಹಣೆ ಸಮಸ್ಯೆ ಇದೆ. ನಾಪೋಕ್ಲು ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಸಂಖ್ಯೆ ಕಡಿಮೆ ಇದೆ. ಮಂಜೂರು ಆಗಿರುವ 34 ಸಿಬ್ಬಂದಿಗಳಲ್ಲಿ 13 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ, 21 ಹುದ್ದೆ ಭರ್ತಿಯಾಗಬೇಕಾಗಿದೆ. ಐವರು ತಜ್ಞ ವೈದ್ಯರಲ್ಲಿ ಇಬ್ಬರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, ಒತ್ತಡ ಹೆಚ್ಚಾಗಿದೆ. ಸುತ್ತಮುತ್ತಲಿನ 20-25 ಗ್ರಾಮಗಳಿಗೆ ಇದು ಒಂದೇ ಆರೋಗ್ಯ ಕೇಂದ್ರವಾಗಿದೆ. ತಜ್ಞ ವೈದ್ಯರ ಕೊರತೆಯಿಂದ ರೋಗಿಗಳು ಬೇರೆ ಜಿಲ್ಲೆಗಳಿಗೆ ಹೋಗುವ ಪರಿಸ್ಥಿತಿ ಎದುರಾಗಿದೆ.
ಮೂರ್ನಾಡು ಬಳಿ ಇರುವ ಪ್ರಾಥಮಿಕ ಆರೋಗ್ಯ ಉಪ ಕೇಂದ್ರದಲ್ಲೂ ಆರೋಗ್ಯ ಸೇವೆ ದೊರೆಯುತ್ತಿಲ್ಲ. ಇದರಿಂದ ಅನಿವಾರ್ಯವಾಗಿ ರೋಗಿಗಳು ಮಡಿಕೇರಿ ಆಸ್ಪತ್ರೆಗೆ ತೆರಳಬೇಕಾಗಿದೆ. ಒಟ್ಟಿನಲ್ಲಿ ಗ್ರಾಮೀಣ ಭಾಗದ ಜನ ಸಂಕಷ್ಟಗಳನ್ನು ಎದುರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಪರವಾಗಿ ಆಮ್ ಆದ್ಮಿ ಪಾರ್ಟಿ ಹೋರಾಟವನ್ನು ರೂಪಿಸಲಿದೆ ಎಂದು ಭೋಜಣ್ಣ ಸೋಮಯ್ಯ ತಿಳಿಸಿದರು.