ಸೋಮವಾರಪೇಟೆ ಜ.16 : ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ದೇವಾಲಯದ ಆವರಣದಲ್ಲಿ ಸಹಸ್ರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ದೇವಾಲಯ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಕೆ.ಎಂ.ಲೋಕೇಶ್, ಶಾಂತಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎಂ.ಧರ್ಮಪ್ಪ, ಸಂಸದ ಪ್ರತಾಪ್ ಸಿಂಹ, ಶಾಸಕ ಡಾ.ಮಂತರ್‍ಗೌಡ, ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್, ಮಾಜಿ ಎಂಎಲ್ಸಿಗಳಾದ ಎಸ್.ಜಿ.ಮೇದಪ್ಪ, ವೀಣಾ ಅಚ್ಚಯ್ಯ, ಮೈಸೂರು ಗೋಪಾಲಗೌಡ ಆಸ್ಪತ್ರೆಯ ಮಾಲೀಕ ಡಾ.ಶ್ರಶೂಷ್‍ಗೌಡ, ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಹರಪಳ್ಳಿ ರವೀಂದ್ರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಸೋಮವಾರಪೇಟೆ ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅರುಣ್ ಕೊತ್ನಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ಸೇರಿದಂತೆ ಗ್ರಾಮದ ಪ್ರಮುಖರು ರಥವನ್ನು ಎಳೆಯುವ ಮೂಲಕ ಚಾಲನೆ ನೀಡಿದರು.
ಶಾಂತಳ್ಳಿಯ ರಾಜಬೀದಿ ಮಾರ್ಗದಲ್ಲಿ ಅದ್ಧೂರಿಯ ರಥೋತ್ಸವಕ್ಕೆ ಸಾಗಿತು. ಮೆರವಣಿಗೆ ಮಂಚೂಣಿಯಲ್ಲಿ ಕಳಸ ಹೊತ್ತ ಮಹಿಳೆಯರು ರಥದೊಂದಿಗೆ ಸಾಗಿದರು. ಕೀಲು ಕುದುರೆ, ಬೊಂಬೆ ಕುಣಿತ ನೆರೆದಿದ್ದ ಭಕ್ತಾದಿಗಳ ಮನಸೂರೆಗೊಂಡಿತು. ದಾರಿಯ ಇಕ್ಕೆಲಗಳಲ್ಲೂ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ರಥೋತ್ಸವವನ್ನು ವೀಕ್ಷಿಸಿದರು.
ಶಾಂತಳ್ಳಿ ಹೋಬಳಿಗೆ ಸೇರಿದ ಕುಮಾರಲಿಂಗೇಶ್ವರ ಸ್ವಾಮಿ ಈ ನಾಡಿನ ಆರಾಧ್ಯ ದೇವರು. ಪ್ರತಿಯೊಬ್ಬರ ಮನೆಯಲ್ಲೂ ಮನೆದೇವರಾಗಿ ಕುಮಾರಲಿಂಗೇಶ್ವರನ್ನನ್ನೇ ಪೂಜೆ ಮಾಡುತ್ತಾರೆ. ವರ್ಷಂಪ್ರತಿ ಒಂದು ವಾರದವರೆಗೆ ಜಾತ್ರೋತ್ಸವ ನಡೆಯುತ್ತದೆ. ಗುರು ಹಿರಿಯರ ಅಪೇಕ್ಷೆಯಂತೆ ಕಳೆದ 6 ದಶಕಗಳಿಂದ ಪ್ರತಿವರ್ಷ ರಥೋತ್ಸವ ಹಾಗೂ ಒಂದು ವಾರದ ತನಕ ಧಾರ್ಮಿಕ ವಿಧಿ ವಿಧಾನದಂತೆ ದೇವರ ಪೂಜೆ ಉತ್ಸವಗಳು ನಡೆಯುತ್ತಿದ್ದು, ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಸಹಸ್ರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಾರೆ.
ಕುಮಾರಲಿಂಗೇಶ್ವರ ದೇವಾಲಯದ ಪ್ರಧಾನ ಲಕ್ಷ್ಮೀನಾರಾಯಣಭಟ್ ತಂಡ ಪೂಜೋತ್ಸವದ ನೇತೃತ್ವ ವಹಿಸಿದ್ದರು. ಭಕ್ತಾದಿಗಳಿಗೆ ಅನ್ನದಾನ ನಡೆಯಿತು. ಬೆಟ್ಟದಳ್ಳಿ, ಹರಗ, ಯಡೂರು, ಕೂತಿ ಅಬ್ಭಿಮಠ ಬಾಚಳ್ಳಿ, ಚಿಕ್ಕತೋಳೂರು, ದೊಡ್ಡತೋಳೂರು, ಕುಮಾರಳ್ಳಿ, ಕೊತ್ತನಳ್ಳಿ, ತಲ್ತಾರೆಶೆಟ್ಟಳ್ಳಿ, ಕುಂದಳ್ಳಿ, ಜಕ್ಕನಳ್ಳಿ, ಬಸವನಕಟ್ಟೆ ಗ್ರಾಮಗಳ ಗ್ರಾಮಸ್ಥರು ಪೂಜೋತ್ಸವದಲ್ಲಿ ಭಾಗವಹಿಸಿ ಗ್ರಾಮದ ಸಮೃದ್ದಿಗಾಗಿ ಪ್ರಾರ್ಥಿಸಿದರು.
ಸಮಾರೋಪ: ಜ.17ರಂದು ಸಮಾರೋಪ ಸಮಾರಂಭ ನಡೆಯಲಿದೆ. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಅತೀಹೆಚ್ಚು ಅಂಕಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನಪಡೆದ ತಲ್ತಾರೆಶೆಟ್ಟಳ್ಳಿ ಗ್ರಾಮದ ಕೆ.ಎ.ಅನನ್ಯ, ಕೆಎಸ್‍ಆರ್‍ಟಿಸಿ ನಿವೃತ್ತ ಡಿಸಿಎಂ ಕೆ.ಎ.ರವೀಂದ್ರ, ಜೀಪು ಚಾಲಕ ಡಿ.ಬಿ.ನವೀನ್ ಅವರುಗಳನ್ನು ಸನ್ಮಾನಿಸಲಾಗುತ್ತದೆ.