ವಿರಾಜಪೇಟೆ ಜ.18 : ಬೇಟೋಳಿ ಗ್ರಾಮದ ರಾಮನಗರದಲ್ಲಿರುವ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಅಯ್ಯಪ್ಪ ಮಹೋತ್ಸವ ಹಾಗೂ ಮಕರ ಜ್ಯೋತಿ ಪೂಜೆಯು ಶ್ರದ್ಧಾಭಕ್ತಿಯಿಂದ ಜರುಗಿತು.
ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವನಾಥ್ ಭಟ್ ಹಾಗೂ ವಾಮನಮೂರ್ತಿ ಭಟ್ ಅವರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರುಗಿತು.
ಅರ್ಚಕರು ಶ್ರೀ ಅಯ್ಯಪ್ಪ ಸ್ವಾಮಿಗೆ ಪುಷ್ಪರ್ಚನೆ, ಭಸ್ಮಾರ್ಚನೆ, ತುಪ್ಪಾಭಿಷೇಕ, ಹಾಲಿನ ಅಭಿಷೇಕ ವನ್ನು ನೆರವೇರಿಸಿದರು. ಅಲ್ಲದೇ ಮಂಟಪದಲ್ಲಿ ಶ್ರೀ ಅಯ್ಯಪ್ಪ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು.
ನಂತರ ದೇವತಾ ಪ್ರಾರ್ಥನೆ ಹಾಗೂ ಶ್ರೀ ಮಹಾಗಣಪತಿ ಹೋಮ, ಗಣಪತಿ, ಶ್ರೀ ನಾಗ, ವನದುರ್ಗೆ ದೇವರುಗಳಿಗೆ ವಿಶೇಷ ಪ್ರಾರ್ಥನೆ ಹಾಗೂ ಪೂಜೆಯನ್ನು ಸಲ್ಲಿಸಲಾಯಿತು.
ಮಧ್ಯಾಹ್ನ ಮಹಾಪೂಜೆಯ ನಂತರ ಪ್ರಸಾದ ವಿತರಣೆ ಹಾಗೂ ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ನಂತರ ಬೇಟೋಳಿ ಮಹಿಳಾ ಮಂಡಳಿ ಹಾಗೂ ಅಯ್ಯಪ್ಪ ವೃತಾಧಾರಿಗಳಿಂದ ಭಜನಾ ಕಾರ್ಯಕ್ರಮ ಜರುಗಿತು.
ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯವರು, ಹೆಗ್ಗಳ, ಬೂದಿಮಾಳ, ಪೆರಂಬಾಡಿ, ಆರ್ಜಿ, ವಿರಾಜಪೇಟೆ, ಕೊಟ್ಟೋಳಿ, ತೋರ ಭಾಗದಿಂದ ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಆಗಮಿಸಿದ್ದರು.
ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಸಭಾಂಗಣದಲ್ಲಿ ಬೃಹತ್ ಎಲ್. ಈ. ಡಿ. ಪರದೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತಿ ಪ್ರಧಾನ ಚಲನಚಿತ್ರ ಮಾಳಿಕಪುರಂ ನ್ನು ಪ್ರದರ್ಶಿಸಲಾಯಿತು.








