ವಿರಾಜಪೇಟೆ ಜ.18 : ಬೇಟೋಳಿ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಪ್ರಪ್ರಥಮ ಮಹಿಳಾ ಚಂಡೆ ಬಳಗ “ರುದ್ರಂ” ಲೋಕಾರ್ಪಣೆಗೊಂಡಿತ್ತು.
ದೇವಸ್ಥಾನದಲ್ಲಿ ಅಯ್ಯಪ್ಪ ಮಹೋತ್ಸವದಂದು ನಡೆದ ಕಾರ್ಯಕ್ರಮದಲ್ಲಿ ಚಂಡೆ ಪ್ರದರ್ಶನದೊಂದಿಗೆ ಲೋಕಾರ್ಪಣೆ ಮಾಡಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಚಂಡೆ ಗುರು ಪ್ರವೀಣ್ ನಾಯಕ್ , ಗ್ರಾಮೀಣ ಭಾಗಗಳಲ್ಲಿ ಇರುವ ಸೂಪ್ತ ಪ್ರತಿಭೆಯನ್ನು ಹೊರತರಬೇಕಾಗಿದೆ. ಇಂದು ಲೋಕಾರ್ಪಣೆಗೊಂಡ ಚಂಡೆ ಬಳಗವು ನಿರಂತರವಾಗಿ ಸೇವೆಯನ್ನು ಸಲ್ಲಿಸುವ ರೀತಿ ಆಗಲಿ ಎಂದು ಅಭಿಪ್ರಾಯಪಟ್ಟರು.
ಯುವ ಜನರು ಕಲೆಗಳ ಉಳಿವಿಗಾಗಿ ಚಂಡೆ ಬಾರಿಸುವುದನ್ನು ಕಲಿತು ಬೆಳೆಸುವುದು ಅನಿವಾರ್ಯವಾಗಿದೆ ಎಂದರು.
ಪುತ್ತೂರಿನ ಸಂಘಟನೆಗಳ ಸದಸ್ಯರಾದ ಸುನಿಲ್ ಬೋರ್ಕರ್ ಮಾತಾನಾಡಿ, ಹಿಂದೂ ಸಮಾಜದಲ್ಲಿ ಒಗ್ಗಟ್ಟು ಮೂಡಿದಾಗ ಮಾತ್ರ ಧರ್ಮದ ಬೆಳವಣಿಗೆ ಸಾಧ್ಯ. ನಮ್ಮ ಧರ್ಮ, ನಮ್ಮ ಸಂಸ್ಕೃತಿ, ಇತಿಹಾಸದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಬೇಕು ಎಂದ ಅವರು ದೇವಾಲಯದಲ್ಲಿ ವಸ್ತ್ರ ಸಂಹಿತೆ ಕಡ್ಡಾಯವಾಗಿ ಜಾರಿಗೆ ಬರಬೇಕೆಂದರು.
ಈ ಸಂದರ್ಭದಲ್ಲಿ ಚಂಡೆ ಗುರುಗಳಾದ ಪ್ರವೀಣ್ ನಾಯಕ್ ರನ್ನು ಸನ್ಮಾನಿಸಿ ಉಡುಗೊರೆಯನ್ನು ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ದೇವಸ್ಥಾನದ ಉಪಾಧ್ಯಕ್ಷ ನಂದ ಬೋರ್ಕರ್, ಕಾರ್ಯದರ್ಶಿ ಸುಮನ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯವರು, ಗ್ರಾಮಸ್ಥರು ಹಾಜರಿದ್ದರು. ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ರಾಮಕೃಷ್ಣ ಬೋರ್ಕರ್ ಸ್ವಾಗತಿಸಿ ನಿರೂಪಿಸಿದರು.










