ಮಡಿಕೇರಿ ಜ.18 : ಸುಂಟಿಕೊಪ್ಪದಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಅಪಹರಣ ಮಾಡುವ ಯತ್ನ ನಡೆದಿದೆ ಎಂದು ಆರೋಪಿಸಿರುವ ಸಾಮಾಜಿಕ ಪರಿವರ್ತನ ಚಳುವಳಿಯ ಜಿಲ್ಲಾ ಸಂಚಾಲಕ ಮೋಹನ್ ಮೌರ್ಯ, ‘ದೌರ್ಜನ್ಯ’ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜ.22 ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಜ.17 ರಂದು ಸಂಜೆ ಮನೆಗೆ ತೆರಳುತ್ತಿದ್ದ ಪರಿಶಿಷ್ಟ ವಿದ್ಯಾರ್ಥಿನಿಯೊಬ್ಬಳನ್ನು ನಾಲ್ವರು ಯುವಕರು ಅಪಹರಣ ಮಾಡಲು ಪ್ರಯತ್ನಿಸಿದ್ದಾರೆ. ಈ ಸಂದರ್ಭ ಸಾರ್ವಜನಿಕರ ಸಹಕಾರದಿಂದ ವಿದ್ಯಾರ್ಥಿನಿ ಸಂಕಷ್ಟದಿಂದ ಪಾರಾಗಿದ್ದಾಳೆ. ಬಳಿಕ ವಿದ್ಯಾರ್ಥಿನಿಯ ಪೋಷಕರು ನಿಡಿದ ದೂರಿನ ಅನ್ವಯ ಪೋಕ್ಸೋ ಪ್ರಕರಣ ದಾಖಲಾಗಿದೆ, ಆದರೆ ಪೊಲೀಸರು ದೌರ್ಜನ್ಯ ಕಾಯ್ದೆಯನ್ನು ಇದರಲ್ಲಿ ಸೇರಿಸಿಲ್ಲವೆಂದು ಆರೋಪಿಸಿದರು.
ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ, ತಲೆ ಮರೆಸಿಕೊಂಡಿರುವ ಮತ್ತೋರ್ವ ಆರೋಪಿಯನ್ನು ಬಂಧಿಸಬೇಕು ಮತ್ತು ಒಟ್ಟು ಪ್ರಕರಣವನ್ನು ದೌರ್ಜನ್ಯ ಕಾಯ್ದೆಯಡಿ ದಾಖಲಿಸಿಕೊಳ್ಳಬೇಕು. ತಪ್ಪಿದಲ್ಲಿ ಸೋಮವಾರದಿಂದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಯಾವುದೇ ಸಮೂಹಕ್ಕೆ ಸೇರಿದ ಹೆಣ್ಣು ಮಕ್ಕಳೆ ಆಗಿರಲಿ, ಅವರ ವಿರುದ್ಧ ನಡೆಯುವ ಇಂತಹ ಅಮಾನವೀಯ ಘಟನೆಯನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಸುಂಟಿಕೊಪ್ಪದಲ್ಲಿ ನಡೆದ ಪ್ರಕರಣವನ್ನು ಪೊಲೀಸರು ಆರಂಭಿಕ ಹಂತದಲ್ಲೆ ದೌರ್ಜನ್ಯ ಕಾಯ್ದೆಯಡಿ ದಾಖಲಿಸಿಕೊಳ್ಳಬೇಕಿತ್ತು. ಆದರೆ, ಆ ರೀತಿ ಮಾಡದೆ ಸಬೂಬುಗಳನ್ನು ನೀಡುವುದು ಸರಿಯಲ್ಲ. ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ವಿದ್ಯಾರ್ಥಿನಿಯ ಪೋಷಕರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಮೋಹನ್ ಮೌರ್ಯ ಒತ್ತಾಯಿಸಿದರು.
ಒಟ್ಟು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ. ನಮ್ಮ ಬೇಡಿಕೆಗೆ ಸೂಕ್ತ ಸ್ಪಂದನ ದೊರಕದಿದ್ದಲ್ಲಿ ರಾಜ್ಯ ಗೃಹ ಸಚಿವರ ಗಮನಕ್ಕೂ ತರಲಾಗುವುದೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಪರಿವರ್ತನ ಚಳುವಳಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿಲೀಪ್ ಕುಮಾರ್, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಜಯರಾಂ, ಹಾಗೂ ನಗರ ಸಂಚಾಲಕ ಹೆಚ್.ಎಸ್.ಗಣೇಶ್ ಉಪಸ್ಥಿತರಿದ್ದರು.









