ಮಡಿಕೇರಿ ಜ.18 : ವಿರಾಜಪೇಟೆ ತಾಲ್ಲೂಕಿನ ತಿತಿಮತಿ ಗ್ರಾ.ಪಂ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ “ಕೂಸಿನ ಮನೆಗೆ” ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.
ನಂತರ ಮಾತನಾಡಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರ ಮಕ್ಕಳಿಗೆ ಕೂಸಿನ ಮನೆಯು ಸಹಕಾರಿಯಾಗಲಿದೆ. ಕೂಸಿನ ಮನೆಯಲ್ಲಿ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳನ್ನು ನುರಿತ ಆರೈಕೆದಾರರ ಮೂಲಕ ಪೋಷಿಸಲಾಗುತ್ತದೆ. ಇದರ ಸದುಪಯೋಗವನ್ನು ತಿತಿಮತಿ ಗ್ರಾ.ಪಂ.ವ್ಯಾಪ್ತಿಯ ಗ್ರಾಮಸ್ಥರು ಪಡೆದುಕೊಳ್ಳಲು ತಿಳಿಸಿದರು.
ಚಿಕ್ಕ ವಯಸ್ಸಿನ ಮಕ್ಕಳ ಮಾನಸಿಕ ಹಾಗೂ ಶಾರೀರಿಕ ಬೆಳೆವಣಿಗೆಯು ಪ್ರಮುಖ ಘಟ್ಟವಾಗಿದ್ದು, ಕೂಸಿನ ಮನೆಯಲ್ಲಿ ಈ ಎಲ್ಲಾ ರೀತಿಯ ಬೆಳವಣಿಗೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಆರೈಕೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
ತಿತಿಮತಿ ಗ್ರಾ.ಪಂ.ಅಧ್ಯಕ್ಷರಾದ ಪೊನ್ನು, ಉಪಾಧ್ಯಕ್ಷರಾದ ಶ್ಯಾಮಲ, ತಾ.ಪಂ.ಇ.ಒ.ಕೆ.ಸಿ ಅಪ್ಪಣ್ಣ, ಮನರೇಗಾ ಸಹಾಯಕ ನಿರ್ದೇಶಕರಾದ ಎಮ್.ಡಿ.ಶ್ರೀನಿವಾಸ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಾದ ಗುರುಶ್ರೀ ,ಗ್ರಾ.ಪಂ ಸರ್ವ ಸದಸ್ಯರು , ಗ್ರಾ.ಪಂ.ಸಿಬ್ಬಂದಿ ವರ್ಗದವರು, ಕೂಸಿನ ಮನೆಯ ಆರೈಕೆದಾರರು ಹಾಗೂ ತಾಲ್ಲೂಕು ಐ.ಇ.ಸಿ.ಸಂಯೋಜಕ ನರೇಂದ್ರ ಹಾಗೂ ತಾಂತ್ರಿಕ ಸಹಾಯಕ ನಿರಂಜನ್ ಹಾಜರಿದ್ದರು.
ಏನಿದು ಕೂಸಿನಮನೆ : ರಾಜ್ಯಾದ್ಯಂತ ಮಹಾತ್ಮಗಾಂಧಿ ನರೇಗಾ ಯೋಜನೆಯ ಮಹಿಳಾ ಕೂಲಿಕಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಕೂಸಿನ ಮನೆ ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸಲಾಗಿದೆ.
ಆರು ತಿಂಗಳಿನಿಂದ ಮೂರು ವರ್ಷದೊಳಗಿನ ಮಕ್ಕಳನ್ನು ಈಗಾಗಲೇ ತರಬೇತಿ ಪಡೆದಿರುವ ಕೇರ್ ಟೇಕರ್ಸ್ ಗಳು ನೋಡಿಕೊಳ್ಳಲಿದ್ದಾರೆ. ಮಕ್ಕಳಿಗಾಗಿ ಆಟಿಕೆಗಳು, ತೊಟ್ಟಿಲು, ಮಕ್ಕಳ ಸ್ನೇಹಿ ಶೌಚಾಲಯವನ್ನು ಸಹ ನಿರ್ಮಿಸಲಾಗಿದೆ. ಮಕ್ಕಳ ಆಕರ್ಷಣೆಗಾಗಿ ಕಾರ್ಟೂನ್ ಗೋಡೆ ಬರಹಗಳನ್ನೂ ಬರೆಸಲಾಗಿದೆ.
ಮಹಿಳಾ ಕೂಲಿಕಾರರು ಕಾಮಗಾರಿಯಲ್ಲಿ ತೊಡಗಿಸಿಕೊಳ್ಳುವ ಸಂದರ್ಭ ಮಕ್ಕಳ ಬೌದ್ಧಿಕ ಮತ್ತು ದೈಹಿಕ ಪೋಷಣೆಗೆ ಅಗತ್ಯ ಚಟುವಟಿಕೆ ಮತ್ತು ಆಹಾರವನ್ನು ಉಚಿತವಾಗಿ ಸರ್ಕಾರದ ವತಿಯಿಂದ ನೀಡಲಾಗುತ್ತದೆ.
ರಾಜ್ಯಾದ್ಯಂತ ಈ ಕೂಸಿನಮನೆ ಕಾರ್ಯಾರಂಭಿಸಿದ್ದು, ಜಿಲ್ಲೆಯ 12 ಗ್ರಾಮ ಪಂಚಾಯತ್ ಗಳಲ್ಲಿ ಕೂಸಿನಮನೆ ನಿರ್ಮಾಣ ಮಾಡಲಾಗಿದೆ. ಜಿಲ್ಲಾ ಪಂಚಾಯತ್ ಹಂತದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರ ಅಧ್ಯಕ್ಷತೆಯ ಸಮಿತಿಯು ಕೂಸಿನಮನೆಯ ಮೇಲುಸ್ತುವಾರಿಯನ್ನು ವಹಿಸಲಿದೆ.









