ಮಡಿಕೇರಿ ಜ.19 : ಜ್ಞಾನ ಸಂಪಾದನೆ ಮತ್ತು ಸಂಸ್ಕೃತಿಯ ಉಳಿವಿಗೆ ಪುಸ್ತಕ ಓದುವ ಹಾಗೂ ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಕರೆ ನೀಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟದ 81ನೇ ಪುಸ್ತಕ ಹಾಗೂ ಲೇಖಕಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಬರೆದಿರುವ 6ನೇ ಪುಸ್ತಕ “ಪೂ ಬಳ್ಳಿ” ಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವಿಶಿಷ್ಟವಾಗಿರುವ ಕೊಡವ ಭಾಷೆಯ ಮೇಲಿನ ಅಭಿಮಾನದಿಂದ ಅನೇಕರು ಕೊಡವ ಪುಸ್ತಕವನ್ನು ಹೊರತರುತ್ತಿದ್ದಾರೆ. ಆ ಮೂಲಕ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪ್ರತ್ನಿಸುತ್ತಿದ್ದಾರೆ ಎಂದರು.
ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಾದರೆ, ಆಚಾರ, ವಿಚಾರ ತಿಳಿದುಕೊಳ್ಳಬೇಕಾದರೆ ಪುಸ್ತಕ ಓದಬೇಕು ಮತ್ತು ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದ ವೀಣಾ ಅಚ್ಚಯ್ಯ, ನಮ್ಮ ಪೂರ್ವಜರು ನೀಡಿರುವ ಸಂದೇಶವನ್ನು ಲೇಖಕಿ ತಮ್ಮ “ಪೂ ಬಳ್ಳಿ” ಪುಸ್ತಕದಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಇದು ಮುಂದಿನ ಪೀಳಿಗೆಗೆ ಮಾರ್ಗದರ್ಶನ ಮತ್ತು ಪ್ರೇರಣೆ ನೀಡುವಂತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಸಾಹಿತಿ ಉಳ್ಳಿಯಡ ಡಾಟಿ ಪೂವಯ್ಯ ಮಾತನಾಡಿ, ಸಾಹಿತ್ಯಕ್ಕೆ ಎಂದಿಗೂ ಸಾವಿಲ್ಲ, ಯಾವುದೇ ಲಾಭವನ್ನು ನಿರೀಕ್ಷೆ ಮಾಡದೆ, ಸ್ವಾರ್ಥ ಮನೋಭಾವನೆಯನ್ನು ಬಿಟ್ಟು ಎಲ್ಲರಿಗೂ ಮೆಚ್ಚುಗೆ ಆಗುವ ರೀತಿಯಲ್ಲಿ ಬರೆಯುವುದೇ ಉತ್ತಮ ಸಾಹಿತ್ಯ ಎಂದರು.
ಎಲ್ಲರ ಜೀವನಕ್ಕೂ ಅನ್ವಯವಾಗುವ ರೀತಿಯ ಬರಹಗಳು ಹೆಚ್ಚು ಹೆಚ್ಚು ರಚನೆಯಾಗಬೇಕು. ವಿಸ್ತಾರವಾದ ವಿಚಾರವನ್ನು ಚುಟುಕಾಗಿ ಕವನದಲ್ಲಿ ವಿವರಿಸುವ ಪ್ರಯತ್ನವನ್ನು “ಪೂ ಬಳ್ಳಿ” ಪುಸ್ತಕದ ಲೇಖಕಿ ಫ್ಯಾನ್ಸಿ ಮುತ್ತಣ್ಣ ಮಾಡಿದ್ದಾರೆ. ಸಾಂಸಾರಿಕ ವಿಚಾರವನ್ನು ವಿನೋದವಾಗಿ ವಿವರಿಸಿದ್ದಾರೆ, ಇದು ಓದುಗರಿಗೆ ಸಂತೋಷವನ್ನು ನೀಡುತ್ತದೆ ಎಂದು ತಿಳಿಸಿದರು.
::: ಅಕಾಡೆಮಿ ಅಧ್ಯಕ್ಷ ಸ್ಥಾನ ಸಿಗಲಿ :::
ಯಾವುದೇ ಲಾಭದ ನಿರೀಕ್ಷೆಗಳಿಲ್ಲದೆ ದಾಖಲೆಯ 81 ಪುಸ್ತಕಗಳನ್ನು ಹೊರ ತರುವ ಮೂಲಕ ಸಾಹಿತ್ಯಾಭಿಮಾನವನ್ನು ಮೆರೆಯುತ್ತಿರುವ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನ ಸಿಗಲಿ ಎಂದು ಡಾಟಿ ಪೂವಯ್ಯ ಹೇಳಿದರು.
ಬರೆಯುವ ಹವ್ಯಾಸ ಹೊಂದಿರುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಪುಸ್ತಕಗಳನ್ನು ಹೊರ ತಂದು ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೂ ಅಯ್ಯಪ್ಪ ಕಾರಣಕರ್ತರಾಗುತ್ತಿದ್ದಾರೆ. ಸಾಹಿತ್ಯಕ್ಕಾಗಿ ದುಡಿಯುವವರಿಗೆ ಅಕಾಡೆಮಿಯಲ್ಲಿ ಸ್ಥಾನಮಾನ ಸಿಗಬೇಕು ಎಂದರು.
“ಪೂ ಬಳ್ಳಿ” ಪುಸ್ತಕದ ಲೇಖಕಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಮಾತನಾಡಿ, ಬರಹಗಾರರನ್ನು ಪ್ರೋತ್ಸಾಹಿಸಿ, ಮುಖ್ಯ ವಾಹಿನಿಗೆ ತಂದಾಗ ಪ್ರತಿಭೆಗಳು ಅನಾವರಣಗೊಳ್ಳುತ್ತವೆ. ಇದು ಸಾಹಿತ್ಯದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಪುಸ್ತಕ ಬಿಡುಗಡೆಗೆ ಸಹಕಾರ ನೀಡಿದ ಕೊಡವ ಮಕ್ಕಡ ಕೂಟ ಹಾಗೂ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.
ಸಾಹಿತಿ ಐಚಂಡ ರಶ್ಮಿ ಮೇದಪ್ಪ ಮಾತನಾಡಿ, ಬರಹಗಾರರಿಗೆ ತಾವು ಬರೆದ ಬರಹ ಪುಸ್ತಕದ ರೂಪದಲ್ಲಿ ಹೊರಬರಬೇಕೆನ್ನುವುದು ಕನಸುಗಳಿರುತ್ತದೆ. ಉತ್ಸಾಹಿ ಬರಹಗಾರರನ್ನು ಗುರುತಿಸಿ ಕೊಡವ ಮಕ್ಕಡ ಕೂಟ ಪ್ರೋತ್ಸಾಹಿಸುತ್ತಾ ಬಂದಿರುವುದರಿಂದ ಕೊಡವ ಸಂಸ್ಕೃತಿ, ಆಚಾರ, ವಿಚಾರ, ಸಾಹಿತ್ಯದ ಬೆಳವಣಿಗೆಗೆ ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಸಾಹಿತ್ಯ ಲೋಕಕ್ಕೆ ಮತ್ತಷ್ಟು ಕೊಡುಗೆ ಸಿಗುವಂತಾಗಲಿ ಎಂದು ಹಾರೈಸಿದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೂಟ ಜಿಲ್ಲೆಯ ಹಲವು ಬರಹಗಾರರು, ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಒಟ್ಟು 80 ಕೃತಿಗಳನ್ನು ಬಿಡುಗಡೆ ಮಾಡಿದೆ. ಇದೀಗ 81ನೇ ಪುಸ್ತಕ, ಲೇಖಕಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅವರು ಬರೆದಿರುವ “ಪೂ ಬಳ್ಳಿ” ಕೊಡವ ಪುಸ್ತಕ ಬಿಡುಗಡೆಗೊಂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬರಹಗಾರರನ್ನು ಗುರುತಿಸಿ, ಪ್ರೋತ್ಸಾಹಿಸಲಾಗುವುದು ಎಂದರು.
ವ್ಯಾಲಿ ಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ಉಪಸ್ಥಿತರಿದ್ದರು.
::: ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ :::
ಲೇಖಕಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅವರು ಬರೆದಿರುವ ಕೊಡವ ಭಾಷೆಯ “ಪಾರು” ಕಾದಂಬರಿ, “ಬದ್‍ಕ್‍ರ ನಡೆ” ಲೇಖನ ಸಂಗ್ರಹ ಪುಸ್ತಕ, ಕನ್ನಡದ “ಕಾಡಿದ ನೆನಪುಗಳು” “ಕಾಡು ಹಕ್ಕಿಯ ಹಾಡು”, “ಕನವರಿಕೆ” ಎನ್ನುವ ಕಥೆ ಕವನ ಸಂಕಲನ ಈಗಾಗಲೇ ಬಿಡುಗಡೆಗೊಂಡಿದ್ದು, “ಪೂ ಬಳ್ಳಿ” ಆರನೇ ಪುಸ್ತಕವಾಗಿದೆ.
“ಪಾರು” ಕಾದಂಬರಿಗೆ ಕೊಡವ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ದೊರೆತ್ತಿದೆ. ಗ್ರಾಮಾಂತರ ಬುದ್ಧಿ ಜೀವಿಗಳ ಬಳಗದಿಂದ “ವಿಶ್ವಮಾನ್ಯ ಕನ್ನಡಿಗ” ಪ್ರಶಸ್ತಿ, ಜೈ ಕರ್ನಾಟಕ ಪಶಸ್ತಿ, ಜೇಸಿ ಐ ಸಾಹಿತ್ಯ ರತ್ನ ಪ್ರಶಸ್ತಿ ದೊರೆತ್ತಿದೆ.
ವಿವಿಧ ಸಂಘ ಸಂಸ್ಥೆಯಿಂದ ಸನ್ಮಾನ, ರಾಜ್ಯ ಮಟ್ಟ-ಜಿಲ್ಲಾ ಮಟ್ಟ ಮೈಸೂರು ದಸರಾ ಕವಿಗೋಷ್ಠಿ ಸೇರಿದಂತೆ ನಾಡಿನ ಬಹುಭಾಷಾ ಕವಿಗೋಷ್ಠಿಯಲ್ಲೂ ಭಾಗವಹಿಸಿದ್ದಾರೆ.
ಕೊಡವ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತ್, ಕರ್ನಾಟಕ ಜಾನಪದ ಪರಿಷತ್ತಿನಲ್ಲಿ ಸೇವೆ ಮಾಡಿದ ಅನುಭವವಿದೆ.
::: ಕೊಡವ ಮಕ್ಕಡ ಕೂಟ :::
ಕೊಡವ ಮಕ್ಕಡ ಕೂಟ ಪ್ರಕಟಿಸಿರುವ 80 ಪುಸ್ತಕಗಳಲ್ಲಿ ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ, ಅಗ್ನಿಯಾತ್ರೆ ಪುಸ್ತಕಕ್ಕೆ “ಗೌರಮ್ಮ ದತ್ತಿ ನಿಧಿ “ಪ್ರಶಸ್ತಿ ಲಭಿಸಿದೆ. ನಾಲ್ಕು ಪುಸ್ತಕಗಳು ಕೊಡವ ಸಿನಿಮಾವಾಗಿದೆ. 1965ರ ಯುದ್ಧ ಹಾಗೂ ಕೊಡಗಿನ ಮಹಾವೀರ (ಸ್ಕ್ವಾ.ಲೀ ಅಜ್ಜಮಾಡ ದೇವಯ್ಯ ಅವರ ಬಗ್ಗೆ ಜೀವನಾಧರಿತ ಬಾಲಿವುಡ್ ಸಿನಿಮಾ ಚಿತ್ರೀಕರಣಕ್ಕೆ ತಯಾರಿ ಹಂತದಲ್ಲಿದೆ)
ಅಲ್ಲದೆ ಕೊಡವರು ಹಾಗೂ ಕಾವೇರಿ, ಮಾವೀರ ಅಚ್ಚುನಾಯಕ, ಕೊಡಗಿನ ಗಾಂಧಿ ಪಂದ್ಯಂಡ ಐ.ಬೆಳ್ಯಪ್ಪ, 1965ರ ಯುದ್ಧ ಹಾಗೂ ಕೊಡಗಿನ ಮಹಾವೀರ, ಆಟ್‍ಪಾಟ್ ಪಡಿಪು (ನಾಲ್ಕು ಸಾವಿರ ಪುಸ್ತಕವನ್ನು ಮಕ್ಕಳಿಗೆ ಉಚಿತವಾಗಿ ನೀಡಲಾಗಿದೆ.), ಕೊಡವ ಕ್ರೀಡಾ ಕಲಿಗಲು, Kodagu Principality V/s British Emipire, The Major who kept his cool, ಪುಣ್ಯಕ್ಷೇತ್ರ ಪರಿಚಯ ಸೇರಿದಂತೆ ಹಲವು ದಾಖಲೀಕರಣ ಪುಸ್ತಕ, ಸಾಧಕರ ವಿವರದ ಪುಸ್ತಕ ಕೊಡಗಿನ ಹಾಗೂ ಕೊಡವ ಆಚಾರ, ವಿಚಾರ ಸಂಬಂಧಪಟ್ಟಂತ ಪುಸ್ತಕ, ಕೊಡಗಿನ ಎರಡು ಮಹಾವೀರ ಚಕ್ರ ಪುರಸ್ಕೃತ ವೀರ ಯೋಧರ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಅಲ್ಲದೆ ಉದಯೋನ್ಮುಖ ಬರಹಗಾರರಿಗೆ ಪ್ರೋತ್ಸಾಹ ನೀಡುವ ಮೂಲಕ ಅವರ ಬರಹಗಳನ್ನು ಪುಸ್ತಕದ ರೂಪದಲ್ಲಿ ಕೊಡವ ಮಕ್ಕಡ ಕೂಟ ಹೊರ ತಂದಿದೆ.










