ಮಡಿಕೇರಿ ಜ.19 : ನಗರದ ಪ್ರಸಿದ್ಧ ಪ್ರವಾಸಿತಾಣ ರಾಜಾಸೀಟ್‍ನ ಮುಖ್ಯ ರಸ್ತೆಯ ಬದಿಗಳಲ್ಲಿ ವ್ಯಾಪಾರ ಮಾಡುತ್ತಿದ್ದ ಬೀದಿಬದಿ ವ್ಯಾಪಾರಿಗಳನ್ನು ನಗರಸಭೆ ತೆರವುಗೊಳಿಸಿದೆ. ಬೀದಿ ಬದಿ ವ್ಯಾಪಾರದಿಂದ ವಾಹನ ಮತ್ತು ಜನ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ನಗರಸಭೆ ಸ್ಪಷ್ಟಪಡಿಸಿದೆ. ಆದರೆ ನಗರಸಭೆಯ ಕ್ರಮವನ್ನು ಖಂಡಿಸಿ ಬೀದಿ ಬದಿ ವ್ಯಾಪಾರಿಗಳು ನಗರಸಭಾ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜಾಸೀಟು ಆವರಣದಲ್ಲಿ ಪುಟಾಣಿ ರೈಲು ಇದ್ದ ಸ್ಥಳದಲ್ಲ್ಲಿ ಈ ಹಿಂದೆ ಬೀದಿ ಬದಿ ವ್ಯಾಪಾರಸ್ಥರು ಗೂಡಂಗಡಿಗಳನ್ನಿರಿಸಿಕೊಂಡು ವ್ಯಾಪಾರ ನಡೆಸುತ್ತಿದ್ದರು. ಪ್ರವಾಸಿತಾಣದ ಬುಡದಲ್ಲೆ ನಡೆಯುತ್ತಿದ್ದ ಬೀದಿ ಬದಿ ವ್ಯಾಪಾರದಿಂದ ಸಮಸ್ಯೆಗಳು ಉದ್ಭವವಾದ ಹಿನ್ನೆಲೆ ಅಲ್ಲಿಂದ ವ್ಯಾಪಾರಿಗಳನ್ನು ತೆರವುಗೊಳಿಸಲಾಗಿತ್ತು.
ಇಲ್ಲಿಂದ ಸ್ಥಳಾಂತರಗೊಂಡ ಬೀದಿಬದಿ ವ್ಯಾಪಾರಿಗಳು ರಾಜಾಸೀಟು ಮುಖ್ಯರಸ್ತೆಯ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇಗುಲದ ಬಳಿ ಗೂಡಂಗಡಿಗಳನ್ನು ನಿರ್ಮಿಸಿಕೊಂಡು ವ್ಯಾಪಾರ ಆರಂಭಿಸಿದರು. ವಾಹನ ದಟ್ಟಣೆ ಮತ್ತು ಜನನಿಬಿಡ ಪ್ರದೇಶದಲ್ಲಿ ಬೀದಿ ವ್ಯಾಪಾರ ನಡೆಸುತ್ತಿರುವುದು ಮತ್ತೆ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿರುವುದನ್ನು ಗಮನಿಸಿದ ನಗರಸಭೆ, ಅಲ್ಲಿಂದ ಅವರನ್ನು ತೆರಳಲು ಸೂಚಿಸಿ, ಪರ್ಯಾಯ ಸ್ಥಳವನ್ನು ಗುರುತಿಸಿತ್ತು. ಇದಕ್ಕೆ ವ್ಯಾಪಾರಿಗಳಿಂದ ಸ್ಪಂದನ ದೊರಕದ ಹಿನ್ನೆಲೆ ಗುರುವಾರ ಸಂಜೆ ಅವರನ್ನು ಪೊಲೀಸರ ಸಹಕಾರದಿಂದ ತೆರವುಗೊಳಿಸಲಾಗಿತ್ತು.
ನಗರಸಭೆಯ ಕ್ರಮವನ್ನು ವಿರೋಧಿಸಿ ಗುರುವಾರ ಸಂಜೆ ಮತ್ತು ಶುಕ್ರವಾರ ಕೂಡ ಬೀದಿ ಬದಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ನಗರಸಭಾ ಅಧ್ಯಕ್ಷೆ ಅನಿತಾಪೂವಯ್ಯ ರಾಜಾಸೀಟ್ ಬಳಿ ಬೀದಿಬದಿ ವ್ಯಾಪಾರಿಗಳಿಂದ ತೊಂದರೆಯಾಗುತ್ತಿರುವ ಬಗ್ಗೆ ಪ್ರತಿನಿತ್ಯ ಸಾರ್ವಜನಿಕರಿಂದ ದೂರುಗಳು ಬರುತ್ತಿತ್ತು. ಅದೂ ಅಲ್ಲದೇ, ಈ ರಸ್ತೆಯಲ್ಲಿ ಖಾಸಗಿ ಬಸ್‍ಗಳ ಸಂಚಾರಕ್ಕೆ ಹಾಗೂ ವಾರಾಂತ್ಯದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ಬೀದಿಬದಿ ವ್ಯಾಪಾರಿಗಳಿಂದ ಅಡಚಣೆಯಾಗುತ್ತಿತ್ತು. ನಗರಸಭೆಯಿಂದ ಈಗಾಗಲೇ ಗುರುತಿಸಲಾದ ಸ್ಥಳಗಳಿಗೆ ತೆರಳುವಂತೆ ಹಲವು ಬಾರಿ ವ್ಯಾಪಾರಿಗಳಿಗೆ ಸೂಚಿಸಿದ್ದರೂ ಹಿಂದೇಟು ಹಾಕುತ್ತಿದ್ದ ಹಿನ್ನೆಲೆಯಲ್ಲಿ ತೆರವುಗೊಳಿಸಲಾಯಿತು ಎಂದು ಸ್ಪಷ್ಟಪಡಿಸಿದರು.
ಬೀದಿ ಬದಿ ವ್ಯಾಪಾರಿಗಳಿಗೆ ದಂಡಿನ ಮಾರಿಯಮ್ಮ ದೇವಾಲಯ ರಸ್ತೆಯ ಪಾಶ್ರ್ವದಲ್ಲಿ, ಹಳೇ ಖಾಸಗಿ ಬಸ್ ನಿಲ್ದಾಣದಿಂದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ತೆರಳುವ ಹಾದಿಯ ಬಲ ಪಾಶ್ರ್ವದಲ್ಲಿ ಮತ್ತು ನಾರ್ತ್ ಕೂರ್ಗ್ ಕ್ಲಬ್ ಬಳಿ ರಸ್ತೆಯ ಬಲ ಪಾಶ್ರ್ವದಲ್ಲಿ ಜಾಗವನ್ನು ಗುರುತಿಸಲಾಗಿದೆ ಅಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದೆಂದು ತಿಳಿಸಲಾಗಿದೆ. ಹೀಗಿದ್ದೂ ವ್ಯಾಪಾರಿಗಳು ಪ್ರತಿಭಟನೆಗೆ ಇಳಿದಿದ್ದಾರೆ, ಅವರೊಂದಿಗೆ ಮಾತುಕತೆ ನಡೆಸುವ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಅನಿತಾ ಪೂವಯ್ಯ ತಿಳಿಸಿದರು.
::: ಮುಂದುವರಿದ ಪ್ರತಿಭಟನೆ :::
ರಾಜಾಸೀಟ್ ಬಳಿಯೇ ನಮಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಪಟ್ಟು ಹಿಡಿದು ಬೀದಿ ಬದಿ ವ್ಯಾಪಾರಿಗಳು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಬೀದಿ ಬದಿ ವ್ಯಾಪಾರಿಗಳ ಸಂಘ ಪ್ರತಿಭಟನೆಗೆ ಬೆಂಬಲ ಸೂಚಿಸಿದೆ.
ನಗರಸಭೆಯ ಕ್ರಮವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ ತೀವ್ರವಾಗಿ ಖಂಡಿಸಿದೆ. ಈ ಪಕ್ಷದ ನಗರಸಭಾ ಸದಸ್ಯರುಗಳಾದ ಅಮೀನ್ ಮೊಹಿಸಿನ್ ಹಾಗೂ ಮನ್ಸೂರ್ ತೆರವು ಕಾರ್ಯಾಚರಣೆ ಸಂದರ್ಭ ಆಕ್ಷೇಪ ವ್ಯಕ್ತಪಡಿಸಿದರು.





















