ಮಡಿಕೇರಿ ಜ.20 : NEWS DESK : ಸೋಮವಾರಪೇಟೆ ಪಟ್ಟಣದ ಮಡಿಕೇರಿ ರಸ್ತೆಯಲ್ಲಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿಗಾಗಿ ಮಣ್ಣು ತೆಗೆಯುತಿರುವುದರಿಂದ ಬಸವೇಶ್ವರ ಪ್ರತಿಮೆ ಕುಸಿಯುವ ಭೀತಿಯ ಹಿನ್ನಲೆಯಲ್ಲಿ ಕಿರಿಕೋಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿ ಹಾಗೂ ವೀರಶೈವ ಸಮಾಜದ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ ಲೋಕೋಪಯೋಗಿ ಇಲಾಖೆಯ ಅಭಿಯಂತರರು ಹಾಗೂ ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಿದರು.
ಸೇತುವೆ ನಿರ್ಮಾಣ ಕಾರ್ಯ ಸ್ವಾಗತಾರ್ಹ, ಅಭಿವೃದ್ಧಿಕಾರ್ಯಗಳಿಗೆ ನಮ್ಮ ಸಹಕಾರವಿದೆ. ಆದರೆ ಬಸವೇಶ್ವರರ ಪ್ರತಿಮೆಗೆ ಯಾವುದೇ ಹಾನಿಯಾಗದಂತೆ ಜಾಗ್ರತೆ ವಹಿಸಬೇಕು ಎಂದು ಸದಾಶಿವ ಸ್ವಾಮೀಜಿ ತಿಳಿಸಿದರು.
ಈ ಸಂದರ್ಭ ಅಭಿಯಂತರ ಅರ್ಬಾಜ್ ಅಹಮ್ಮದ್ ಮಾತನಾಡಿ, ಹಲವು ದಿನಗಳಿಂದ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಪ್ರತಿಮೆಯ ಪಕ್ಕದಲ್ಲಿ ಜಾಗರೂಕತೆಯಿಂದ ಕೆಲಸ ಮಾಡಿತಿದ್ದೇವೆ ಆದರೆ ಮಣ್ಣು ಕುಸಿಯುತ್ತಿರುವುದರಿಂದ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಇದು ಅನಿವಾರ್ಯ. ಅಗತ್ಯ ಬಿದ್ದರೆ ಪ್ರತಿಮೆಯನ್ನು ತಾತ್ಕಾಲಿಕವಾಗಿ ತೆಗೆಯಬೇಕಾಗುತ್ತದೆ ಎಂದು ವಿವರಿಸಿದರು.
ಪ್ರತಿಮೆಗೆ ಯಾವುದೇ ಹಾನಿಯಾಗದಂತೆ ಕಾರ್ಯ ನಿರ್ವಹಿಸುತ್ತವೆ ಹಾಗೂ ಪ್ರತಿಮೆ ಜಾರದಂತೆ ಬೆಲ್ಟ್ ಹಾಕಿ ಎಳೆದು ಕಟ್ಟಲಾಗಿದೆ ನಂತರ ದುರಸ್ತಿ ಕಾರ್ಯ ಮಾಡಿಕೊಡಲಾಗುತ್ತದೆ ಎಂದು ಗುತ್ತಿಗೆದಾರರಾದ ಆರ್.ಸಿ.ಗಣೇಶ್ ಹಾಗೂ ಚಂಗಪ್ಪ ತಿಳಿಸಿದರು.
ಪ್ರತಿಮೆ ನಿರ್ಮಾಣಗೊಂಡು 24 ವರ್ಷಗಳು ಸಂದಿವೆ ಈ ವರೆಗೆ ಯಾವುದೇ ತೊಂದರೆ ಆಗಿರಲಿಲ್ಲ ಅಲ್ಲದೆ ಕರ್ನಾಟಕ ಸರ್ಕಾರ ಈಗ ಬಸವೇಶ್ವರರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿರುವುದರಿಂದ ಪ್ರತಿಮೆಗೆ ಮಹತ್ವ ಹೆಚ್ಚಿದೆ ಆದ್ದರಿಂದ ತೊಂದರೆ ಆಗದಂತೆ ಕಾಮಗಾರಿ ನಡೆಸುವಂತೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಮನವಿ ಮಾಡಿದರು.
ಅನಿವಾರ್ಯವಾದರೆ ತೊಂದರೆ ಆಗದಂತೆ ತಾತ್ಕಾಲಿಕವಾಗಿ ಪ್ರತಿಮೆಯನ್ನು ಸ್ಥಳಾಂತರಿಸಿ ಬಸವಜಯಂತಿಯೊಳಗಾಗಿ ಪುನರ್ನಿರ್ಮಿಸಿಕೊಡಿ ಎಂದು ಸದಾಶಿವ ಸ್ವಾಮೀಜಿ ತಿಳಿಸಿದರು. ಇದಕ್ಕೆ ಅಭಿಯಂತರರು ಹಾಗೂ ಗುತ್ತಿಗೆದಾರರು ಒಪ್ಪಿಗೆ ಸೂಚಿಸಿದರು.
ಈ ಸಂದರ್ಭ ವೀರಶೈವ ಸಮಾಜದ ಯಜಮಾನ ಶಿವಕುಮಾರ್, ಶೆಟ್ರು ಜಯಣ್ಣ, ಕಾರ್ಯದರ್ಶಿ ನಾಗರಾಜ್, ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷೆ ಸುಮಾಸುಧೀಪ್ ಹಾಗೂ ವೀರಶೈವ ಸಮಾಜದ ಪ್ರಮುಖರು ಹಾಜರಿದ್ದರು.









