ವಿರಾಜಪೇಟೆ ಜ.20 : NEWS DESK : ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರಲ್ಲಿ ಕನ್ನಡ ನೆಲ ಜಲ ಮತ್ತು ಭಾಷೆಯ ಬಗ್ಗೆ ಅಭಿಮಾನ ಮೂಡಿಸುವ ಕೆಲಸ ಮಾಡುತ್ತಾ ಕನ್ನಡಿಗರಲ್ಲಿ ಜಾಗೃತವಾಗಿರುವ ಕನ್ನಡ ಅಭಿಮಾನವನ್ನು ಬಡಿದೆಬ್ಬಿಸುತ್ತಿದೆ ಎಂದು ದೇವಣಗೇರಿ ಬಿ.ಸಿ.ಪ್ರೌಢಶಾಲೆಯ ಅಧ್ಯಕ್ಷ ಮುಕ್ಕಾಟೀರ ಐ.ಸುನೀಲ್ ನಾಣಯ್ಯ ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ್, ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್ ಹಾಗೂ ದೇವಣಗೇರಿ ಬಿ.ಸಿ.ಪ್ರೌಢಶಾಲೆ ವತಿಯಿಂದ ಶಾಲಾ ಸಭಾಂಗಣದಲ್ಲಿ ನಡೆದ ಮುಲ್ಲೆಂಗಡ ಶಂಕರಿ ಪೊನ್ನಪ್ಪ ಮತ್ತು ಮುಲ್ಲೇಂಗಡ ಮಧೋಶ್ ಪೂವಯ್ಯ ಅವರು ಸ್ಥಾಪಿಸಿದ “ದಿ. ಸಾಹಿತಿ ಮುಲ್ಲೇಂಗಡ ಬೇಬಿ ಚೋಂದಮ್ಮ ಸ್ಮರಣಾರ್ಥ ದತ್ತಿನಿಧಿ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ಜೀವನದಲ್ಲಿ ಸಾಹಿತ್ಯವನ್ನು ಅಳವಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ದೇವಣಗೇರಿ ಬಿ.ಸಿ. ಪ್ರೌಢ ಶಾಲೆ ಮುಖ್ಯೋದ್ಯಾಯರಾದ ಹೆಚ್.ಡಿ. ಲೋಕೇಶ್ ಕನ್ನಡದ ಹಿರಿಯ ಕವಿ, ಸಾಹಿತಿಗಳ ಸಾಹಿತ್ಯದ ಬಗ್ಗೆ ಉಲ್ಲೇಖಿಸಿ ಮಾತನಾಡಿ, ಮಹಾಕವಿಗಳಾದ ಕುವೆಂಪು, ದ.ರಾ. ಬೇಂದ್ರೆ, ಕುಮಾರವ್ಯಾಸ, ಪಂಪ, ರನ್ನ ಇವರ ಸಾಹಿತ್ಯದ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ವಿದ್ಯಾರ್ಥಿಗಳು ಸಾಹಿತ್ಯ ಪುಸ್ತಕ ಓದಬೇಕು, ಬೇರೆ ಭಾಷೆಗಳನ್ನು ಸಂಪರ್ಕಕ್ಕಾಗಿ ಬಳಸಬಹುದು. ಆದರೆ ಮಾತೃ ಭಾಷೆ ಕನ್ನಡವನ್ನು ಗಟ್ಟಿಗೊಳಿಸಬೇಕು. ಕನ್ನಡ ಅಂಕಿಗಳನ್ನು ಬಳಸಿ ಅವುಗಳನ್ನು ಮುಂದಿನ ಪೀಳಿಗೆಗಾಗಿ ಉಳಿಸಬೇಕಿದೆ. ಕನ್ನಡ ಬೆಳೆದು ಬಂದಿರುವ ಹಾದಿ ಹಾಗೂ ನಾವು ಉಳಿಸಿಕೊಂಡು ಹೋಗುವ ಅನಿವಾರ್ಯದ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳಲ್ಲಿ ಓದಿನ ಅಭಿರುಚಿಯನ್ನು ಬೆಳೆಸಲು ದತ್ತಿ ಉಪನ್ಯಾಸದಂಥ ಕಾರ್ಯಕ್ರಮ ಸಹಕಾರಿ. ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ನಡೆಸಲಾದ ಈ ಕಾರ್ಯಕ್ರಮದಿಂದ ಪರಿಷತ್ತಿನ ಉದ್ದೇಶ ಈಡೇರಿದೆ. ವಿದ್ಯಾರ್ಥಿಗಳು ಸಾಧಿಸುವ ಛಲವನ್ನು ಮೈಗೂಡಿಸಿಕೊಂಡು ಏಕಾಗ್ರತೆಯಿಂದ ವ್ಯಾಸಂಗ ಮಾಡಿ ಗುರಿ ಸಾಧನೆ ಮಾಡಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಹೆಚ್.ಜಿ. ಸಾವಿತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಚಲಿತ ವಿದ್ಯಾಮಾನದಲ್ಲಿ ಮಕ್ಕಳಿಗೆ ಮಾತೃಭಾಷೆ ಕಲಿಕೆ ಬಹಳ ಅತ್ಯವಶ್ಯಕವಾಗಿದೆ, ಕನ್ನಡ ಶಾಲೆಗೆ ಮಕ್ಕಳನ್ನು ನೋಂದಣಿ ಮಾಡಿಸುವಲ್ಲಿ ಪೆÇೀಷಕರ ಆಸಕ್ತಿ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿರುವುದು ಆತಂಕದ ವಿಷಯವಾಗಿದೆ. ಕನ್ನಡ ಭಾಷಾ ಶಾಲೆಗಳು, ನಾವು ಕಲಿತ ಶಾಲೆಗಳು ಇಂದಿನ ದಿನಗಳಲ್ಲಿ ಅಳಿವಿನ ಅಂಚಿನಲ್ಲಿರುವುದನ್ನು ನಾವು ನೋಡುತಿದ್ದೇವೆ, ಕನ್ನಡದ ಕಾರ್ಯಕ್ರಮವನ್ನು ಆಯೋಜಿಸಿ ಕನ್ನಡಮ್ಮನ ತೇರನ್ನು ಎಳೆಯುವ ಕನ್ನಡದ ಮನಸುಗಳನ್ನು ಒಗ್ಗೂಡಿಸುವ ಕೆಲಸ ಸಾಹಿತ್ಯ ಪರಿಷತ್ತು ಮಾಡುತ್ತಿದೆ ಎಂದರು.
ಸಾಹಿತಿ ಪುಷ್ಪಲತಾ ಶಿವಪ್ಪ ಕೊಡಗಿನ ಮಹಿಳಾ ಸಾಹಿತಿಗಳು ಕುರಿತು ಉಪನ್ಯಾಸ ನೀಡಿ ಮಾತನಾಡಿ ಕೊಡಗಿನ ಸಾಹಿತ್ಯ ಪರಂಪರೆ ನಡೆದು ಬಂದ ಹಾದಿ ಬಗ್ಗೆ ವಿವರಿಸಿ ಕೊಡಗಿನ ಸಾಹಿತ್ಯಕ್ಕೆ ಜಾನಪದ ಸೊಗಡು ಹೇಗೆ ತಳಕು ಹಾಕಿಕೊಂಡು ಬಂದಿದೆ. ಕರ್ನಾಟಕದ ಮಹಿಳಾ ಮಣಿಗಳು ಸಾಹಿತ್ಯ ಕ್ಷೇತ್ರಕ್ಕೆ ಯಾವ ರೀತಿ ದುಡಿದು ಜಾನಪದದ ಮೂಲಕ ಕತೆ ಕವಿತೆ ಬರೆದು ಸಾಹಿತ್ಯ ರಚನೆ ಮಾಡಿದ್ದಾರೆ ಎನ್ನುವ ಬಗ್ಗೆ ವಿವರಿಸಿದರಲ್ಲದೆ. ಕೊಡಗಿನ ಮುಲ್ಲೇಂಗಡ ಬೇಬಿ ಚೊಂದಮ್ಮ ಅವರು ಸಾಹಿತ್ಯ ಪಂಡಿತೆ ಎನ್ನುವ ಬಿರುದು ಪಡೆದುಕೊಂಡಿದ್ದಾರೆ. ಕೊಡಗಿನ ಪ್ರಥಮ ಬರಹಗಾರ್ತಿ ಕೊಡಗಿನ ಗೌರಮ್ಮ ಪ್ರಶಸ್ತಿ ಪಡೆದುಕೊಂಡ ಅನೇಕ ಸಾಹಿತಿಗಳು ನಮ್ಮಲ್ಲಿದ್ದಾರೆ ಎಂದು ಬರಹಗಾರರ ಬಗ್ಗೆ ಮಾಹಿತಿ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಅಮ್ಮತ್ತಿ ಹೋಬಳಿ ಮಟ್ಟದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಮನಸುಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಕನ್ನಡದ ಸಾಹಿತಿಗಳು ಹಾಗೂ ಕನ್ನಡ ನೆಲದ ಬಗ್ಗೆ ಅಭಿಮಾನ ಮೂಡಿಸುವ ಕೆಲಸ ಮಾಡುತ್ತಿದೆ. ಉಪನ್ಯಾಸಗಳ ಮೂಲಕ ನಮ್ಮ ನೆಲದ ಪ್ರತಿಭೆಗಳನ್ನು ಪರಿಚಯಿಸುವ ಕೆಲಸ ಮಾಡುತ್ತದೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಪಿ.ರಾಜೇಶ್, ನಾವು ಮಾಡುವ ಕೆಲಸದ ಮೇಲೆ ಶ್ರದ್ಧೆ ಹಾಗೂ ಭಕ್ತಿಯನ್ನು ಇಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸಾಕು. ನಾವು ಜೀವನದಲ್ಲಿ ಯಶಸ್ವಿ ವ್ಯಕ್ತಿಗಳಾಗಿ ಹೊರಹೊಮ್ಮಲು ಸಾಧ್ಯವಿದೆ. ವಿದ್ಯಾರ್ಥಿಗಳು ತಂದೆ-ತಾಯಿಗಳು ಹಾಗೂ ಗುರು ಹಿರಿಯರನ್ನು ಗೌರವದಿಂದ ಕಾಣಬೇಕು. ವಿನಯವಂತಿಕೆ ಹಾಗೂ ಶಿಸ್ತು, ಸಂಯವು ಜೀವನದ ಉಸಿರಾಗಬೇಕು. ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ ಪತ್ರಿಕೆ ಓದಬೇಕು. ಪ್ರಚಲಿತ ವಿದ್ಯಮಾನಗಳು ತಿಳಿಯಬೇಕು. ಮಕ್ಕಳಲ್ಲಿ ಸಾಹಿತ್ಯ ಪ್ರಜ್ಞೆ ಮೂಡಬೇಕು ಎಂದು ಹೇಳಿದರು.
ಸತತ 7 ವರ್ಷಗಳಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ದೇವಣಗೇರಿ ಬಿ.ಸಿ.ಪ್ರೌಢಶಾಲೆ ಶೇ.100 ಫಲಿತಾಂಶ ಪಡೆದ ಹಿನ್ನೆಲೆ ಶಾಲಾ ಮುಖ್ಯೋಪದ್ಯಾಯರಾದ ಹೆಚ್.ಡಿ.ಲೋಕೇಶ್ ಅವರನ್ನು ಸಾಹಿತ್ಯ ಪರಿಷತ್ತ್ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಬಡಕಡ ರಜಿತ ಕಾರ್ಯಪ್ಪ, ಸೋಮೆಯಂಡ ಕೌಸಲ್ಯ ಸತೀಶ್, ಶಿಕ್ಷಕಿ ಪ್ರಮೀಳಾ, ಎ.ಸಿ.ಸುನೀತ ಸೇರಿದಂತೆ ಶಾಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಜರಿದ್ದರು.
Breaking News
- *ಜ.5 ರಂದು ಪತ್ರಕರ್ತರ ಕ್ರಿಕೆಟ್ ಕಲರವ : ಆಟಗಾರರ ಪಟ್ಟಿ ಬಿಡುಗಡೆ*
- *ಮಡಿಕೇರಿಯ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ಸಂವಿಧಾನ ದಿನಾಚರಣೆ : ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿ : ಸಿವಿಲ್ ನ್ಯಾಯಾಧೀಶೆ ಶುಭ*
- *ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ಗುರುತಿನ ಚೀಟಿ ವಿತರಣೆ : ಜನಸಾಮಾನ್ಯರಿಗೆ ಕಾನೂನು ಅರಿವು ಮತ್ತು ನೆರವು ಕಲ್ಪಿಸಿ : ನ್ಯಾಯಾಧೀಶ ಹೊಸಮನಿ ಪುಂಡಲೀಕ ಸಲಹೆ*
- *ಬಸವನಹಳ್ಳಿ ವಸತಿ ಶಾಲೆಯಲ್ಲಿ ನಾಟಕ ಶಿಬಿರ*
- *ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ*
- *ಚಿರತೆ ಸೆರೆಗೆ ಸೂಚನೆ*
- *ಕರಿಕೆ- ಭಾಗಮಂಡಲ ಹೆದ್ದಾರಿ ಕಾಮಗಾರಿಗೆ ಚಾಲನೆ : ಮೂಲಭೂತ ಸೌಲಭ್ಯ ಒದಗಿಸುವ ಭರವಸೆ ನೀಡಿದ ಶಾಸಕ ಪೊನ್ನಣ್ಣ*
- *ಮೂರ್ನಾಡಿನಲ್ಲಿ 69ನೇ ಕನ್ನಡ ರಾಜ್ಯೋತ್ಸವ ಸಂಭ್ರಮ*
- *ಪ್ರಧಾನಿಯನ್ನು ಭೇಟಿಯಾದ ಸಿಎಂ, ಡಿಸಿಎಂ : ವಿವಿಧ ಬೇಡಿಕೆಗಳ ಮನವಿ ಸಲ್ಲಿಕೆ*
- *ಅಭಿವೃದ್ದಿಯಲ್ಲಿ ರಾಜಕಾರಣ ಮಾಡಲಾರೆ : ಶಾಸಕ ಎ.ಎಸ್.ಪೊನ್ನಣ್ಣ*