ಸೋಮವಾರಪೇಟೆ ಜ.20 : NEWS DESK : ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಜ.26ರಂದು ಪದವಿಪೂರ್ವ ಕಾಲೇಜು ಮೈದಾನದಲ್ಲಿ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಯಿತು.
ಸೋಮವಾರಪೇಟೆ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಎಸ್.ಎನ್.ನರಗುಂದ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಪ್ರತಿ ಪೂರ್ವಭಾವಿ ಸಭೆಯಲ್ಲೂ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ತಹಶೀಲ್ದಾರ್ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮಕ್ಕೆ ಹಾಜರಾಗಬೇಕೆಂದು ಸೂಚನೆ ನೀಡಿದರು.
ಧ್ವಜಾರೋಹಣ, ಮೈದಾನ ಸ್ವಚ್ಪತೆ, ಸಾಂಸ್ಕೃತಿಕ ಕಾರ್ಯಕ್ರಮಗಳ ತಯಾರಿ, ಬೆಳಗ್ಗಿನ ಉಪಾಹಾರ, ಕವಾಯಿತು, ಕುಡಿಯುವ ನೀರು ಮತ್ತಿತರ ವ್ಯವಸ್ಥೆಯ ಕುರಿತು ಅಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆಯವರು ನಿರ್ವಹಿಸುವಂತೆ ಸೂಚಿಸಿದರು. ಮೈದಾನ ಸ್ವಚ್ಪತೆಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯವರು ಒಂದು ದಿನ ಮೊದಲೇ ಗಮನ ಹರಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಈರ್ವರು ನಿವೃತ್ತ ಯೋಧರನ್ನು ಸನ್ಮಾನಿಸುವಂತೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ಸದಸ್ಯರುಗಳಾದ ಹೆಚ್.ಸಿ.ನಾಗೇಶ್, ಕವನ್ ಕಾರ್ಯಪ್ಪ, ಬಿ.ಇ.ಜಯೇಂದ್ರ, ಎಸ್.ಡಿ.ವಿಜೇತ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ ಕಾಲೇಜುಗಳ ಮುಖ್ಯಸ್ಥರು ಇದ್ದರು.