ಮಡಿಕೇರಿ ಜ.20 : NEWS DESK : ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಶತಮಾನೋತ್ಸವ ಸಂಭ್ರಮ ಹಿನ್ನೆಲೆ ಎರಡು ದಿನಗಳ ಕಾಲ ನಗರ ಗಾಂಧಿ ಮೈದಾನದಲ್ಲಿ ಆಯೋಜಿತ ವಾಹನ ಮತ್ತು ಕೃಷಿ ಯಂತ್ರೋಪಕರಣಗಳ ಸಾಲ ಮೇಳಕ್ಕೆ ಚಾಲನೆ ದೊರಕಿತು.
ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುಜಾ ಕುಶಾಲಪ್ಪ ಅವರು ಬೆಳಗ್ಗೆ ಮೇಳಕ್ಕೆ ಚಾಲನೆಯನ್ನು ನೀಡಿದರು.
ದ್ವಿಚಕ್ತ ಮತ್ತು ಚತುಷ್ಚಕ್ರವಾಹನ ಮಾರಾಟದ ಹಲ ಕಂಪೆನಿಗಳು ತಮ್ಮ ವಾಹನಗಳನ್ನು ಮೇಳದಲ್ಲಿ ಪ್ರದರ್ಶನಕ್ಕಿರಿಸಿದ್ದರೆ, ಕೃಷಿ ಯಂತ್ರೋಪಕರಣಗಳ ಮಾರಾಟದ ಹಲ ಮಳಿಗೆಗಳು ಗಮನ ಸೆಳೆಯುತ್ತಿವೆ. ಜಿಲ್ಲಾ ವ್ಯಾಪ್ತಿಯ ಬೆಳೆಗಾರರು, ಸಾರ್ವಜನಿಕರು ಮೇಳಕ್ಕೆ ಭೇಟಿ ನೀಡುತ್ತಿರುವುದು ಕಂಡು ಬಂದಿತು.
ಈ ಎರಡು ದಿನಗಳ ಮಾರಾಟ ಮೇಳದಲ್ಲಿ ವಿಶೇಷವಾಗಿ ಜಿಲ್ಲೆಯ ಕೃಷಿಕರ ಅನುಕೂಲಕ್ಕಾಗಿ ಕೃಷಿ ಯಂತ್ರೋಪಕರಣಗಳನ್ನು ಮತ್ತು ವಾಹನಗಳನ್ನು ಬ್ಯಾಂಕ್ ನೀಡುವ ಸಾಲದ ಮೂಲಕ ಖರೀದಿಸಿದಲ್ಲಿ, ಸಾಲದ ಒಟ್ಟು ಮೊತ್ತದ ಶೇ.7 ರಷ್ಟು ರಿಯಾಯಿತಿಯನ್ನು ಕೆಡಿಸಿಸಿ ಬ್ಯಾಂಕ್ ನೀಡುತ್ತಿದೆ. ಈ ವಿಶೇಷ ಸೌಲಭ್ಯ ಮೇಳಕ್ಕೆ ಸಾರ್ವಜನಿಕರನ್ನು ಸೆಳೆಯುತ್ತಿದೆ.
ಮೇಳದಲ್ಲಿ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳು, ಮಡಿಕೇರಿ ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ ಸೇರಿದಂತೆ ಹಲ ಗಣ್ಯರು ಪಾಲ್ಗೊಂಡಿದ್ದರು.