ಮಡಿಕೇರಿ ಜ.20 : ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಮೂರ್ನಾಡಿನ ಕರಸೇವಕರನ್ನು ವಿಶ್ವ ಹಿಂದೂ ಪರಿಷತ್ ನ ಮೂರ್ನಾಡು ಘಟಕ ಸನ್ಮಾನಿಸಿ ಗೌರವಿಸಿತು.
1992ರಲ್ಲಿ ರಾಮ ಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡ ಕರಸೇವಕರಾದ ಬೈಲೋಳಿ ಸುಬ್ಬಯ್ಯ, ವೀರೇಶ್, ಸೋಮ ಚೆಲುವ ಹಾಗೂ ಬಿ.ಕೆ.ಪೂವಪ್ಪ ಅವರ ಪರವಾಗಿ ಪತ್ನಿ ಕಲಾವತಿ ಅವರನ್ನು ಸನ್ಮಾನಿಸಿ ಕರಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು.
ನಾಲ್ವರು ಕರಸೇವಕರ ಮನೆಗಳಿಗೇ ತೆರಳಿ ಗೌರವಿಸಿದ ವಿಹೆಚ್‍ಪಿ ಪ್ರಮುಖರು ಅಯೋಧ್ಯೆಯ ಮಂತ್ರಾಕ್ಷತೆ ನೀಡಿದರು. ಜ.22 ರಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯಾಗುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಹಿಂದೂ ಕಾರ್ಯಕರ್ತರ ಪರಿಶ್ರಮದಿಂದ ಇದು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ವಿಶ್ವ ಹಿಂದೂ ಪರಿಷತ್ ನ ಮೂರ್ನಾಡು ಘಟಕದ ಅಧ್ಯಕ್ಷ ಬಿ.ವಿ.ಮೋಹನ್, ಕಾರ್ಯದರ್ಶಿ ದಿನೇಶ್ ಮೂರ್ನಾಡು, ಬಜರಂಗದಳದ ಪ್ರಮುಖ ಎಂ.ಕೆ.ಪ್ರವೀಣ್, ಮಾತೃಶಕ್ತಿಯ ಜಿಲ್ಲಾ ಪ್ರಮುಖರಾದ ಪೂರ್ಣಿಮಾ ಸುರೇಶ್, ಜಾನಕಿ ಚಂಗಪ್ಪ ಹಾಗೂ ಕಾರ್ಯಕರ್ತರು ಈ ಸಂದರ್ಭ ಹಾಜರಿದ್ದರು.