ಮಡಿಕೇರಿ ಜ.20 : ಮುದ್ದ ಕಳಲ ಯುವಕ ಸಂಘದ ವತಿಯಿಂದ ನಗರದ ಕೋಟೆ ಮಹಿಳಾ ಸಮಾಜದಲ್ಲಿ ಮೊಗೇರ ಸಮುದಾಯ ಬಾಂಧವರ ವಿಶೇಷ ಸಭೆ ನಡೆಯಿತು.
ಸಂಘದ ಜಿಲ್ಲಾಧ್ಯಕ್ಷ ಜ್ಯೋತಿ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊಡಗಿನ ವಿವಿಧೆಡೆ ಕಾಫಿ ತೋಟಗಳ ಲೈನ್ ಮನೆಯಲ್ಲಿ ಜೀವನ ಸಾಗಿಸುತ್ತಿರುವ ಪರಿಶಿಷ್ಟ ಜಾತಿ ಮೊಗೇರ ಕುಟುಂಬಗಳಿಗೆ ಶೀಘ್ರ ನಿವೇಶನ ಒದಗಿಸುವ ಬಗ್ಗೆ ಚರ್ಚಿಸಲಾಯಿತು.
ಸ್ವತಂತ್ರ ಪೂರ್ವದಿಂದಲೇ ಸ್ವಂತ ಮನೆ ಇಲ್ಲದೆ ಕೊಡಗಿನ ವಿವಿಧೆಡೆ ಕಾಫಿ ತೋಟಗಳ ಲೈನ್ ಮನೆಯಲ್ಲಿ ಜೀವನ ಸಾಗಿಸುತ್ತಿರುವ ಪರಿಶಿಷ್ಟ ಜಾತಿ ಮೊಗೇರ ಕುಟುಂಬಗಳು ವಿವಿಧ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಕಳೆದ ಮೂರು ವರ್ಷಗಳಿಂದ ಜಿಲ್ಲಾಡಳಿತದ ಗಮನ ಸೆಳೆಯಲಾಗುತ್ತಿದೆ. ನಿವೇಶನದ ಬೇಡಿಕೆ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಜಿಲ್ಲಾಡಳಿತ ಹಾಗೂ ಚುನಾಯಿತ ಪ್ರತಿನಿಧಿಗಳು ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಜ್ಯೋತಿ ಕುಮಾರ್ ಆರೋಪಿಸಿದರು.
ನಮ್ಮ ಸಮಸ್ಯೆಗೆ ನಾವೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸ್ವ ಪ್ರಯತ್ನ ನಡೆಯಬೇಕಾಗಿದೆ ಎಂದ ಅವರು, ಖಾಸಗಿ ಭೂಮಿಯನ್ನು ಖರೀದಿಸಿ ಒಬ್ಬರಿಗೆ ನಾಲ್ಕು ಸೆಂಟ್ ನಂತೆ ಜಾಗ ಹಂಚಿಕೆ ಮಾಡಿಕೊಳ್ಳುವ ಕುರಿತು ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಸಭೆಯಲ್ಲಿ ಚರ್ಚಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದರು.
ಎರಡು ಅಥವಾ ಮೂರು ಎಕರೆ ಜಾಗ ಮಾರಾಟ ಮಾಡುವವರು ಇದ್ದಲ್ಲಿ 8197093920 ಸಂಖ್ಯೆಗೆ ಮಾಹಿತಿ ನೀಡುವಂತೆ ಹಾಗೂ ನಿವೇಶನಕ್ಕೆ ಹೆಸರು ನೋಂದಾವಣಿ ಮಾಡಿಕೊಳ್ಳಲಿಚ್ಛಿಸುವ ಮೊಗೇರ ಕುಟುಂಬಗಳು ಈ ಸಂಖ್ಯೆಯನ್ನೇ ಸಂಪರ್ಕಿಸುವಂತೆ ಜ್ಯೋತಿ ಕುಮಾರ್ ತಿಳಿಸಿದರು.
ಸಂಘದ ಪದಾಧಿಕಾರಿಗಳಾದ ರಮೇಶ್ ಕಗ್ಗೋಡ್ಲು, ವಸಂತ ಬೆಟ್ಟಗೇರಿ, ಸಂಜೀವ ಮೂರ್ನಾಡು, ಸತೀಶ್ ಮೂರ್ನಾಡು, ಕಿರಣ್ ಮೂರ್ನಾಡು, ಸಿದ್ದಾರ್ಥ್ ಬೆಟ್ಟಗೇರಿ, ಪಾರ್ವತಿ ಮೇಕೇರಿ ಮತ್ತಿತರರು ಉಪಸ್ಥಿತರಿದ್ದರು.