ಚೆಯ್ಯಂಡಾಣೆ ಜ.20 : NEWS DESK : ಹೊದ್ದೂರು ಗ್ರಾ.ಪಂ ವ್ಯಾಪ್ತಿಯ ಪಾಲೇಮಾಡು ಗ್ರಾಮಕ್ಕೆ ಗ್ರಾಮಸ್ಥರ ಮನವಿ ಮೇರೆಗೆ ಶಾಸಕ ಮಂತರ್ ಗೌಡ ಅವರ ಮುತುವರ್ಜಿಯಿಂದ ನೂತನ ಬಸ್ ಸೇವೆಯನ್ನು ಪ್ರಾರಂಭಿಸಲಾಯಿತು.
ಪಾಲೇಮಾಡು ಗ್ರಾಮದಲ್ಲಿ ನೂರಾರು ಬಡ ಕುಟುಂಬಗಳು ವಾಸಿಸುತ್ತಿದ್ದು, ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಪಟ್ಟಣ ಸೇರಿದಂತೆ ಇನ್ನಿತರ ಕಡೆಗಳಿಗೆ ತೆರಳಲು ಖಾಸಗಿ ವಾಹನಗಳನ್ನು ಅವಲಂಬಿಸುವ ಪರಿಸ್ಥಿತಿ ಇದೆ. ಇದರಿಂದ ಸಮಸ್ಯೆ ಅನುಭವಿಸುತ್ತಿದ್ದ ಗ್ರಾಮಸ್ಥರು ಬಸ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಪಾಲೆಮಾಡು ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಶಾಸಕ ಮಂತರ್ ಗೌಡ ಅವರಲ್ಲಿ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಶಾಸಕರು ಮುತುವರ್ಜಿಹಿಸಿ ಪಾಲೆಮಾಡು ಗ್ರಾಮಕ್ಕೆ ಮೊದಲ ಬಾರಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿದ್ದು, ಶಾಸಕರ ಜನಸ್ಪಂದನೆಗೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.
ಗ್ರಾಮಕ್ಕೆ ಬಸ್ ಬರುತ್ತಿದ್ದಂತೆ ಬಸ್ಸಿಗೆ ಪೂಜೆ ಸಲ್ಲಿಸಿದ ಗ್ರಾಮಸ್ಥರು ಆತ್ಮೀಯವಾಗಿ ಬರಮಾಡಿಕೊಂಡರು. ಪಾಲೆಮಾಡು ಗ್ರಾಮದಿಂದ ಮೂರ್ನಾಡು ಮಾರ್ಗವಾಗಿ ಮಡಿಕೇರಿಗೆ ಪ್ರತಿ ದಿನ ಬೆಳಗ್ಗೆ 7.45 ಹಾಗೂ ಸಂಜೆ 5ಗಂಟೆಗೆ ಬಸ್ ಸೇವೆ ಲಭ್ಯವಾಗಲಿದೆ.
ಈ ಸಂದರ್ಭ ಮಾತನಾಡಿದ ಹೊದ್ದೂರು ಗ್ರಾ.ಪಂ ಅಧ್ಯಕ್ಷರು ಹಾಗೂ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ಕಾಂಗ್ರೆಸ್ ಸರ್ಕಾರ ಜನರ ಪರವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಕಳೆದ 25 ವರ್ಷಗಳಿಂದ ಇಲ್ಲಿನ ಗ್ರಾಮಸ್ಥರು ವಾಸಿಸಲು ಒಂದು ಸೂರಿಗಾಗಿ ಹಲವಾರು ಹೋರಾಟಗಳನ್ನು ನಡೆಸುತ್ತಾ ಬಂದಿದ್ದರು. ಆದರೆ ಈ ಹಿಂದಿನ ಸರ್ಕಾರ ಮತ್ತು ಶಾಸಕರು ಇವರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ. ಚುನಾವಣೆ ಸಂದರ್ಭ ಶಾಸಕ ಮಂತರ್ ಗೌಡ ಅವರು ಇಲ್ಲಿನ ಗ್ರಾಮಸ್ಥರಿಗೆ ಸಮಸ್ಯೆಯನ್ನು ಪರಿಹರಿಸಿ ಗ್ರಾಮದ ಅಭಿವೃದ್ಧಿಗೆ ಸ್ಪಂದಿಸುವ ಭರವಸೆಯನ್ನು ನೀಡಿದ್ದರು. ಅದರಂತೆ ಗ್ರಾಮಸ್ಥರ ಮನವಿ ಮೇರೆಗೆ ಶಾಸಕರ ಪ್ರಯತ್ನದಿಂದ ಗ್ರಾಮಕ್ಕೆ ಮೊದಲ ಬಾರಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿದ್ದಾರೆ.
ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಗ್ರಾಮದ ರಸ್ತೆ ಕಾಮಗಾರಿ ಸೇರಿದಂತೆ ಗ್ರಾಮದ ಎಲ್ಲಾ ಅಭಿವೃದ್ಧಿಗೆ ಶಾಸಕರು ಸ್ಪಂದಿಸಲಿದ್ದಾರೆ ಎಂದು ಹಂಸ ಭರವಸೆ ನೀಡಿದರು.
ಗ್ರಾ.ಪಂ ಉಪಾಧ್ಯಕ್ಷೆ ಅನುರಾಧ, ಸದಸ್ಯರಾದ ಕುಸುಮಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಮೊಣ್ಣಪ್ಪ, ಪಂಚಾಯಿತಿ ಸದಸ್ಯ ಹಮೀದ್ ಕಬಡಕ್ಕೇರಿ, ಲಕ್ಷ್ಮಿ ಹಾಗೂ ಗ್ರಾಮಸ್ಥರು ಹಾಜರಿದ್ದರು.
ವರದಿ : ಅಶ್ರಫ್